ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿರಹಟ್ಟಿಯ ಫಕೀರ್ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಯಾರು ಪೇಮೆಂಟ್ ಮಾಡಿದ್ದಾರೆ ಎಂಬುದನ್ನು ಮೇ. ೭ ರ ನಂತರ ಬಹಿರಂಗಪಡಿಸುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರವಾಗಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ನಮಗೆ. ನಮ್ಮ ಅಭ್ಯರ್ಥಿಗೆ ಯಾವುದೇ ಸಮಸ್ಯೆಯಿಲ್ಲ. ಹಿಂದೆ ಮಾತೆ ಮಹಾದೇವಿ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು ಅವರ ಎಷ್ಟು ಮತಗಳನ್ನು ಪಡೆದರು ಎಂಬುದು ಎಲ್ಲರಿಗೂ ಗೊತ್ತಿದೆ. ದಿಂಗಾಲೇಶ್ವರ ಸ್ವಾಮೀಜಿ ಬಹಳವೆಂದರೆ ೫೦೦೦ ಮತಗಳನ್ನು ಪಡೆಯುತ್ತಾರೆ ಎಂಬ ಭವಿಷ್ಯ ನುಡಿದರು.
ಈ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ದಿಂಗಾಲೇಶ್ವರ ಸ್ವಾಮೀಜಿಯನ್ನ ತೆಗಳುತ್ತಿದ್ದರು. ಇದೀಗ ಒಳ್ಳೆಯ ಸ್ವಾಮೀಜಿ ಎಂದು ಹೇಳುತ್ತಿರುವುದನ್ನು ಗಮನಿಸಿದರೆ ಸ್ವಾಮೀಜಿಗೆ ಪೇಮೆಂಟ್ ಆಗಿದೆ ಎಂಬುದು ಖಚಿತ ಎಂದು ತಿಳಿಸಿದರು.
ದೇಶದ ವಿಚಾರ ಬಂದಾಗ ಲಿಂಗಾಯತರು, ವೀರಶೈವ ಲಿಂಗಾಯತರು ಬಿಜೆಪಿ ಜೊತೆಗೆ ನಿಲ್ಲುತ್ತಾರೆ ಎಂದು ಇದೇ ವೇಳೆ ತಿಳಿಸಿದರು.
ರಾಜ್ಯದಲ್ಲಿ ಸೃಷ್ಟಿಯಾಗುತ್ತಿರುವ ತಾಲಿಬಾನ್ ಮಾದರಿಯ ಸಂಸ್ಕೃತಿಯನ್ನು ರಾಜ್ಯಪಾಲರು ಗಮನಿಸುತ್ತಿದ್ದಾರೆ. ಎಲ್ಲಾ ಘಟನಾವಳಿಗಳನ್ನು ಕ್ರೋಢೀಕರಿಸಿ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಬೇಕು. ಈ ಕುರಿತು ರಾಜ್ಯಪಾಲರನ್ನು ಭೇಟಿಯಾಗಲು ನಾವು ಮಾತನಾಡುತ್ತಿದ್ದೇವೆ ಎಂದರು.