ನವದೆಹಲಿ, ಏಪ್ರಿಲ್ 18: ಅರವಿಂದ್ ಕೇಜ್ರಿವಾಲ್ ಬೇಕಂತಲೇ ಮಾವಿನ ಹಣ್ಣು, ಸಿಹಿ ತಿಂಡಿಗಳನ್ನು ತಿನ್ನುತ್ತಿದ್ದಾರೆ. ಸಕ್ಕರೆ ಹಾಕಿದ ಚಹಾವನ್ನೇ ಕುಡಿಯುತ್ತಿದ್ದಾರೆ ಎಂದು ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ದೂರಿದೆ.
ತಮ್ಮ ದೇಹದ ಶುಗರ್ ಲೆವಲ್ ನಿರಂತರವಾಗಿ ಹೆಚ್ಚುತ್ತಿದ್ದು, ವೈದ್ಯರನ್ನು ಸಮಾಲೋಚಿಸಲು ತಮಗೆ ಅವಕಾಶ ಕೊಡುವಂತೆ ಅರವಿಂದ್ ಕೇಜ್ರಿವಾಲ್ ದೆಹಲಿ ಕೋರ್ಟ್ನಲ್ಲಿ ಮನವಿ ಮಾಡಿದ್ದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರನ್ನು ವಾರಕ್ಕೆ ಮೂರು ಬಾರಿ ಸಂಪರ್ಕಿಸಿ ಸಮಾಲೋಚನೆ ನಡೆಸಲು ಅನುಮತಿಸಬೇಕೆಂದು ಅವರು ಕೋರಿದ್ದಾರೆ. ಈ ಅರ್ಜಿ ವಿಚಾರಣೆ ವೇಳೆ, ಜಾರಿ ನಿರ್ದೇಶನಾಲಯ ತನ್ನ ಹತಾಶೆಯನ್ನು ತೋರ್ಪಡಿಸಿದೆ. ಸಕ್ಕರೆ ಮಟ್ಟ ಹೆಚ್ಚಾಗಲೆಂದು ಉದ್ದೇಶಪೂರ್ವಕವಾಗಿ ಕೇಜ್ರಿವಾಲ್ ಮಾವಿನ ಹಣ್ಣು, ಸಿಹಿತಿಂಡಿ ತಿನ್ನುತ್ತಿದ್ದಾರೆ ಎಂದು ವಾದಿಸಿದೆ.
‘ಹೆಚ್ಚಿನ ಮಟ್ಟದ ಡಯಾಬಿಟಿಸ್ ಇದೆ ಎಂದು ಹೇಳಿಕೊಳ್ಳುವ ವ್ಯಕ್ತಿ ನಿಯಮಿತವಾಗಿ ಮಾವಿನ ಹಣ್ಣು, ಸಿಹಿ ತಿಂಡಿಗಳನ್ನು ತಿನ್ನುತ್ತಾರೆ. ಸಕ್ಕರೆ ಹಾಕಿದ ಚಹಾವನ್ನೇ ಸೇವಿಸುತ್ತಾರೆ. ಇದೆಲ್ಲವೂ ಕೂಡ ಜಾಮೀನು ಪಡೆಯಲು ಅವರು ಮಾಡುತ್ತಿರುವ ತಂತ್ರ,’ ಎಂದು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಜೋಹೇಬ್ ಹುಸೇನ್ ಕೋರ್ಟ್ನಲ್ಲಿ ಹೇಳಿದ್ದಾರೆ.