ದುಬೈ,ಪ್ರಿಲ್ 18: ಅರಬ್ಬರ ನಾಡು ದುಬೈ ನಲ್ಲಿ ಮಹಾಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, 2 ವರ್ಷಗಳಿಗಾಗುವಷ್ಟು ಮಳೆ ಒಂದೇ ದಿನ ಸುರಿದಿದೆ.
ದುಬೈ ಹೇಳಿಕೇಳಿ ಮರುಭೂಮಿ.. ದುಬೈ ಮಾತ್ರವಲ್ಲದೇ ಯುಎಇ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ವರ್ಷವಿಡೀ ಒಣಹವೆ ಇರುತ್ತದೆ. ವರ್ಷವೊಂದರಲ್ಲಿ ತೀರಾ ಕಡಿಮೆ ಎನ್ನುವಷ್ಟು ಮಳೆಯಾಗುತ್ತದೆ. ಆದರ ಇದಕ್ಕೆ ಅಪವಾದ ಎಂಬಂತೆ ಹಲವು ವರ್ಷಗಳಿಗೆ ಆಗುವಷ್ಟು ಮಳೆ ಒಮ್ಮೆಲೆ ನೆಲವೇ ಕೊಚ್ಚಿಹೋಗುವಷ್ಟು ಮಳೆ ಸುರಿದಿದೆ.
ಒಂದೆರಡು ವರ್ಷಗಳಲ್ಲಿ ಆಗುವಷ್ಟು ಮಳೆ ಒಂದೇ ದಿನದಲ್ಲಿ ಸುರಿದಿದೆ. ದುಬೈ ಮಾತ್ರವಲ್ಲ ಪಕ್ಕದ ಸೌದಿ ಅರೇಬಿಯಾ, ಒಮಾನ್, ಯೆಮನ್, ಕುವೈತ್, ಜೋರ್ಡನ್ನಲ್ಲೂ ಒಂದು ವಾರದಿಂದೀಚಿಗೆ ಇಂಥದ್ದೇ ಮಳೆ ಸುರಿಯುತ್ತಿದೆ. ಈ ಹಿಂದೆಯೂ ಇಂಥ ಮಳೆಯಾಗಿದ್ದರೂ ಈಗ ಸುರಿಯುತ್ತಿರುವ ಮಳೆಯ ಪ್ರಮಾಣ ವಿಪರೀತ ಎನಿಸುವಷ್ಟು ಇದೆ.
1975ರ ಫೆಬ್ರುವರಿ 16–17ರ ಮಧ್ಯರಾತ್ರಿಯಲ್ಲಿ ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿ ಮತ್ತು ಜೋರ್ಡನ್ನ ಭಾಗದಲ್ಲಿ ಕೆಲವೇ ಗಂಟೆಗಳಲ್ಲಿ 10 ಸೆಂಟಿಮೀಟರ್ಗಿಂತಲೂ ಹೆಚ್ಚು ಮಳೆ ಸುರಿದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. 1977ರಲ್ಲಿ ಮತ್ತು 1981ರಲ್ಲಿ ಅಂಥದ್ದೇ ಮಳೆ ಮರುಕಳಿಸಿತ್ತು. ಮಧ್ಯಪ್ರಾಚ್ಯದ ದೇಶಗಳಲ್ಲಿ ಮಳೆಮಾಪನ ಆರಂಭವಾಗಿದ್ದು 1949ರಲ್ಲಿ. 1975, 1977 ಮತ್ತು 1981ರಲ್ಲಿ ಸುರಿದ ವಿಪರೀತ ಮಳೆಯು 1949ರಿಂದ ಆವರೆಗೆ ಸುರಿದ ಅತಿಹೆಚ್ಚಿನ ಮಳೆಯಾಗಿತ್ತು.
ವಿಜ್ಞಾನಿಗಳ ಪ್ರಕಾರ ಅರಬ್ ರಾಷ್ಟ್ರಗಳಲ್ಲಿನ ಮಹಾಮಳೆಗೆ 3 ಕಾರಣಗಳನ್ನು ವಿವರಿಸಲಾಗಿದೆ. ಏಷ್ಯಾದತ್ತ ಬೀಸುವ ಹವಾ ಮಾರುತಗಳು (ಜೆಟ್ ಸ್ಟ್ರೀಂ), ಶೀತಮಾರುತಗಳು ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಕಾರಣಗಳಿಂದಾಗಿ ಮಹಾಮಳೆಯಾಗುತ್ತದೆ ಎನ್ನಲಾಗಿದೆ.