ಕೋಲಾರ, ಏಪ್ರಿಲ್ 18: ಬಿಜೆಪಿ ಸರ್ಕಾರವು ಬಡವರ ಮತ್ತು ರೈತರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸದ ಕಾರಣ ದೇಶದ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಪರ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಸಂವಿಧಾನಕ್ಕೆ ಧಕ್ಕೆ ಉಂಟಾಗಿದ್ದು, ಇಂಡಿಯಾ ಮೈತ್ರಿಕೂಟವನ್ನು ಅಧಿಕಾರಕ್ಕೆ ತರದಿದ್ದರೆ ಜನತೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಜತೆಗೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಲಾಗುವುದು. ಇದರಿಂದ ಅಗತ್ಯವಿರುವವರಿಗೆ ಪ್ರಯೋಜನವಾಗಲಿದೆ ಎಂದು ಭರವಸೆ ನೀಡಿದ್ದಾರೆ.
ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಕೋಲಾರದ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ಗೆ (ಬಿಜಿಎಂಎಲ್) ಭೇಟಿ ನೀಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.
ದೇಶದಲ್ಲಿ ಪಕ್ಷಪಾತ ತಾಂಡವವಾಡುತ್ತಿದ್ದು, ಎನ್ಡಿಎ ಸರ್ಕಾರದಲ್ಲಿ ಕೇವಲ 20 ಉದ್ಯಮಿಗಳು 70 ಕೋಟಿ ಜನರ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೋದಿ ಸರಕಾರ ಆಯ್ದ ಉದ್ಯಮಿಗಳ 16 ಲಕ್ಷ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದೆ. ಬೆರಳೆಣಿಕೆಯಷ್ಟು ಬಂಡವಾಳಶಾಹಿಗಳಿಗೆ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಯಾವುದೇ ಹಂತಕ್ಕೂ ಹೋಗುತ್ತಾರೆ ಎಂದು ಅವರು ಟೀಕಿಸಿದ್ದಾರೆ.
ಪ್ರಭಾವಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಇಡಿ, ಸಿಬಿಐನಂತಹ ಸಂಸ್ಥೆಗಳನ್ನು ಪ್ರಧಾನಿ ಬಳಸಿಕೊಳ್ಳುತ್ತಿರುವುದು ಸಾಬೀತಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದಲಿತ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಶೇ 90 ಕ್ಕೂ ಹೆಚ್ಚು ಜನರಿಗೆ ಯಾವುದೇ ಕ್ಷೇತ್ರದಲ್ಲಿ ಅವಕಾಶ ದೊರೆಯುತ್ತಿಲ್ಲ. ಇದು ಈ ಸರಕಾರವು ದೀನದಲಿತರು ಮತ್ತು ಕಷ್ಟದಲ್ಲಿರುವವರ ಪರವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ. ಅಧಿಕಾರಕ್ಕೆ ಬಂದರೆ, ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯವನ್ನು ಒದಗಿಸಲು ಕಾಂಗ್ರೆಸ್ ಕ್ರಾಂತಿಕಾರಕ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.