ಮರಿಯಮ್ಮನಹಳ್ಳಿ ಏ.17: ರಾಮ ನವಮಿ ನಿಮಿತ್ತ ಪಟ್ಟಣದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ಜೋಡಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.
ಭಕ್ತಾದಿಗಳು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರುಗಳಿಗೆ ಹೂವು, ಹಣ್ಣು, ಕಾಯಿ ಅರ್ಪಿಸಿ ಭಕ್ತಿ ಭಾವ ಮೆರೆದರು. ಉಭಯ ದೇವರುಗಳ ಜೋಡಿ ರಥೋತ್ಸ ಅಂಗವಾಗಿ ವೈಡೂರ್ಯ ಆಭರಣಗಳು, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಹಲವು ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಸಂಜೆ ಜರುಗಿದ ನಾಣಿಕೆರೆ ಜೋಡಿ ರಥೋತ್ಸವದಲ್ಲಿ ಅಪಾರ ಜನಸ್ತೋಮ ನೆರೆದಿತ್ತು, ರಥಕ್ಕೆ ಹೂವು ಹಣ್ಣು ಎಸೆದು ಧನ್ಯರಾದರು. ರಥೋತ್ಸವ ಜರುಗುವುದಕ್ಕೂ ಮುಂಚೆ ಪಟಾಕ್ಷಿ ಹರಾಜು ಕಾರ್ಯಕ್ರಮ ನಡೆಯಿತು.
ರಥೋತ್ಸವದಲ್ಲಿ ಮರಿಯಮ್ಮನಹಳ್ಳಿಯ ಸುತ್ತಮುತ್ತಲಿನ 33 ಹಳ್ಳಿಗಳು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ರಮಣೀಯ ಕ್ಷಣವನ್ನು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಪಟ್ಟಣದ ಮಸೀದಿ ಹತ್ತಿರ ಮುಸ್ಲಿಂ ಸಮಾಜದವರು ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿ, ನೀರಿನ ಅರವಟಿಕೆ ವ್ಯವಸ್ಥೆ ಮಾಡಿದ್ದರು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸದೆ ಶಾಂತಿಯುತವಾಗಿ ಜರುಗಿತು.