ಬೆಂಗಳೂರು, ಏಪ್ರಿಲ್ 17: ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಬಿಸಿಲಿಗೆ ತತ್ತರಿಸಿದ್ದ ಜನರಿಗೆ ಆಗಾಗ ಕೃಪೆ ತೋರುತ್ತಿರುವ ಮಳೆರಾಯ ತಂಪೆರೆಯುತ್ತಿದ್ದಾರೆ. ಇದೀಗ ರಾಜ್ಯದ ಕೆಲವು ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರೀ ಮಳೆ (7cm ಗೂ ಅಧಿಕ) ಬರುವ ಕಾರಣಕ್ಕೆ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ಘೋಷಣೆ ಮಾಡಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮುಂದಿನ ಏಪ್ರಿಲ್ 24ರವರೆಗೆ ವ್ಯಾಪಕ ಮಳೆ ಬರುವ ಮುನ್ಸೂಚನೆ ಇದೆ. ಈ ಪೈಕಿ ದಕ್ಷಿಣ ಒಳನಾಡಿನ ಭಾಗದಲ್ಲಿ ತುಸು ಹೆಚ್ಚೆ ಚುರುಕಾಗಿರುವ ಪೂರ್ವ ಮುಂಗಾರು ಮಳೆಯು ಅಬ್ಬರಿಸಲಿದೆ.
ಏಪ್ರಿಲ್ 20ರಂದು ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಒಂದು ದಿನ ಭರ್ಜರಿ ಮಳೆ ಬರಲಿದೆ. ಪ್ರತಿ ಗಂಟೆಗೆ ಸುಮಾರು 40-50 ಕಿಲೋ ಮೀಟರ್ ವರೆಗೆ ಜೋರು ಗಾಳಿ ಬೀಸಲಿದೆ. ಅಂದು ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ತಾಪಮಾನ ಇಳಿಕೆ ಆಗಲಿದೆ. ಮಬ್ಬು ವಾತಾವರಣ ಸೃಷ್ಟಿಯಾಗಲಿದೆ, ಇಡೀ ದಿನ ಮಳೆ ಸುರಿಯುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಅನೇಕ ಜಿಲ್ಲೆಗಳಿಗೆ ವ್ಯಾಪಕ ಮಳೆ ಸಾಧ್ಯತೆ ರಾಜ್ಯದಲ್ಲಿ ಇಂದಿನಿಂದ ಏಪ್ರಿಲ್ 24ರವರೆಗೆ ವಿವಿಧ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಇದರಲ್ಲಿ ಏಪ್ರಿಲ್ 20ರಂದು ಯೆಲ್ಲೋ ಅಲರ್ಟ್ ಪಡೆದ ಜಿಲ್ಲೆಗಳನ್ನು ಬಿಟ್ಟು ಉಳಿದಂತೆ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ಮಂಡ್ಯ, ಶಿವಮೊಗ್ಗ, ವಿಜಯನಗರ, ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ಸಂಭವ ಇದೆ.
ಮುಂದಿನ ನಾಲ್ಕೈದು ದಿನಗಳಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಧಾರವಾಡ, ವಿಜಯಪುರ, ಕೊಪ್ಪಳ್ಳ, ಗದಗ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಅಲ್ಲಲ್ಲಿ ಮಳೆ ಆಗಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.