ಹುಬ್ಬಳ್ಳಿ, ಏಪ್ರಿಲ್ 17: ಧಾರವಾಡ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಶಿವಾನಂದ ಮುತ್ತಣ್ಣನವರ್ ನಿನ್ನೆ ಮಂಗಳವಾರ ಹುಬ್ಬಳ್ಳಿಯಿಂದ ಧಾರವಾಡದವರೆಗೆ ವಿಶಿಷ್ಟ ರ್ಯಾಲಿ ನಡೆಸಿಕೊಂಡು ಹೋಗಿ ಚುನಾವಣಾಧಿಕಾರಿ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಹುಬ್ಬಳ್ಳಿಯ ಮಾಜಿ ವಾರ್ಡ್ ಸದಸ್ಯ ಮುತ್ತಣ್ಣನವರ್ ತಮ್ಮ ಬೆಂಬಲಿಗರೊಂದಿಗೆ ಎತ್ತಿನ ಗಾಡಿಯಲ್ಲಿ 20 ಕಿ.ಮೀ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಸುವ ಮೂಲಕ ಗಮನ ಸೆಳೆದರು.
ಮುತ್ತಣ್ಣನವರ್ ಮತ್ತು ಅವರ ಬೆಂಬಲಿಗರು ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ರ್ಯಾಲಿ ಪ್ರಾರಂಭಿಸಿದರು. ಅಲಂಕೃತ ಎತ್ತಿನ ಬಂಡಿಗಳು ಆಕರ್ಷಣೆಯಾಗಿದ್ದು, ಒಂದು ಗಂಟೆಯಲ್ಲಿ ರ್ಯಾಲಿ ಧಾರವಾಡ ತಲುಪಿತು. ಕೆಲವು ಕಡೆ ಮೀಸಲಾದ ಬಿಆರ್ ಟಿಎಸ್ ಕಾರಿಡಾರ್ನಲ್ಲಿ ಬಂಡಿ ಚಲಿಸಲು ಪೊಲೀಸರು ಅನುಮತಿ ನೀಡಿದರು. ದಾರಿಯಲ್ಲಿ ಸಾಗುತ್ತಿದ್ದ ಅನೇಕರು ಬಂಡಿಗಳ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯುತ್ತಿರುವುದು ಕಂಡುಬಂತು.
ಈ ಸಂದರ್ಭದಲ್ಲಿ ಮುತ್ತಣ್ಣನವರ್ ಮಾತನಾಡಿ, ಮಹದಾಯಿ ನೀರಿಗಾಗಿ ಹಲವು ವರ್ಷಗಳಿಂದ ಉತ್ತರ ಕರ್ನಾಟಕದ ಜನರು ಹೋರಾಟ ನಡೆಸುತ್ತಿದ್ದಾರೆ. ಈ ಭಾಗದ ಹಲವು ರಾಜಕಾರಣಿಗಳು ಮಹದಾಯಿ ವಿಚಾರದಲ್ಲಿ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.
ಮಹದಾಯಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಲಿ, ಪ್ರಧಾನಿ ನರೇಂದ್ರ ಮೋದಿಯಾಗಲಿ ಇದುವರೆಗೆ ಏನೂ ಪ್ರಯೋಜನ ಮಾಡಿಕೊಟ್ಟಿಲ್ಲ. ಸತತವಾಗಿ ಆಯ್ಕೆಯಾಗಿದ್ದರೂ ಜೋಶಿ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಜನರ ಗಮನ ಸೆಳೆಯಲು ಬಂಡಿ ರ್ಯಾಲಿ ಇಂದು ಮಾಡುತ್ತಿದ್ದೇನೆ ಎಂದರು.