ನವದೆಹಲಿ,ಏಪ್ರಿಲ್ 17: ಕೇರಳದ ವಯನಾಡು ಕ್ಷೇತ್ರದ ಜೊತೆಗೆ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಈ ಬಾರಿ ಕೂಡ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ. ಗಾಂಧಿ ಮನೆತನದ ಭದ್ರಕೋಟೆಗಳು ಎಂದು ಪರಿಗಣಿಸಲ್ಪಟ್ಟಿದ್ದ ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರದಿಂದ ವರ್ಷಗಳ ಕಾಲ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸಂಸದರಾಗಿದ್ದರು. ಸೋನಿಯಾ ಗಾಂಧಿಯವರು ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ರಾಯ್ ಬರೇಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.
ಆದರೆ ಅಮೇಥಿ ಕ್ಷೇತ್ರವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ಸೋನಿಯಾ ಗಾಂಧಿ ಕುಟುಂಬಕ್ಕೆ ಮನಸ್ಸಿದ್ದಂತೆ ಕಾಣುತ್ತಿಲ್ಲ. ಕಳೆದ ಬಾರಿ ರಾಹುಲ್ ಗಾಂಧಿಯವರು ಬಿಜೆಪಿಯ ಸ್ಮೃತಿ ಇರಾನಿ ಮುಂದೆ ಸೋತಿದ್ದರು. ಈ ಬಾರಿ ಮತ್ತೆ ಸ್ಪರ್ಧಿಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಇಂದು ಉತ್ತರ ಪ್ರದೇಶದ ಗಜಿಯಾಬಾದ್ ನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ನಾಯಕ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೀಟುಗಳ ಭವಿಷ್ಯ ಬಗ್ಗೆ ಹೇಳುವುದಿಲ್ಲ. 15-20 ದಿನಗಳ ಹಿಂದೆ ಬಿಜೆಪಿ ಸುಮಾರು 180 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಾನು ಭಾವಿಸಿದ್ದೆ ಆದರೆ ಈಗ ಅವರು 150 ಸ್ಥಾನಗಳನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ನಮಗೆ ವರದಿಗಳು ಬರುತ್ತಿವೆ. ಉತ್ತರ ಪ್ರದೇಶದಲ್ಲಿ ನಾವು ಬಹಳ ಬಲವಾದ ಮೈತ್ರಿಯನ್ನು ಹೊಂದಿದ್ದೇವೆ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬ ವಿಶ್ವಾಸವಿದೆ ಎಂದರು.
ಇದು ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ತೀರ್ಮಾನವಾಗಿದ್ದು, ಅದರ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ. ಸಿಇಸಿ ಮತ್ತು ಕಾಂಗ್ರೆಸ್ ಅಧ್ಯಕ್ಷರು ನನ್ನನ್ನು ಏನು ಮಾಡಬೇಕೆಂದು ಕೇಳುತ್ತಾರೆ, ನಾನು ಅದನ್ನು ಮಾಡುತ್ತೇನೆ, ಅಂತಹ ನಿರ್ಧಾರಗಳನ್ನು ನಮ್ಮ ಸಿಇಸಿಯಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದರು.
ರಾಹುಲ್ ಗಾಂಧಿ 2004 ರಿಂದ ಸತತ ಮೂರು ಬಾರಿ ಅಮೇಥಿ ಕ್ಷೇತ್ರವನ್ನು ಗೆದ್ದಿದ್ದಾರೆ. ಆದರೆ, 2019 ರಲ್ಲಿ ಸ್ಮೃತಿ ಇರಾನಿಯವರು 55,000 ಮತಗಳಿಂದ ಗೆದ್ದು ಬೀಗಿದರು.
ಕಳೆದ 10 ವರ್ಷಗಳಲ್ಲಿ ನೋಟು ಅಮಾನ್ಯೀಕರಣ, ತಪ್ಪು ಜಿಎಸ್‌ಟಿ ಜಾರಿ ಮತ್ತು ಅದಾನಿಗಳಂತಹ ದೊಡ್ಡ ಕೋಟ್ಯಾಧಿಪತಿಗಳನ್ನು ಬೆಂಬಲಿಸುವ ಮೂಲಕ ಪ್ರಧಾನಿ ಮೋದಿ ಉದ್ಯೋಗ ಸೃಷ್ಟಿಯ ವ್ಯವಸ್ಥೆಯನ್ನು ಕಡಿಮೆ ಮಾಡಿದ್ದಾರೆ. ನಾವು ನಮ್ಮ ಪ್ರಣಾಳಿಕೆಯಲ್ಲಿ 23 ಯೋಜನೆಗಳನ್ನು ನೀಡಿದ್ದೇವೆ, ಒಂದು ಕ್ರಾಂತಿಕಾರಿ ಕಲ್ಪನೆ- ನಾವು ಉತ್ತರ ಪ್ರದೇಶದ ಎಲ್ಲಾ ಪದವೀಧರರು ಮತ್ತು ಡಿಪ್ಲೋಮಾ ಹೊಂದಿರುವವರಿಗೆ ಅಪ್ರೆಂಟಿಸ್‌ಶಿಪ್ ಹಕ್ಕನ್ನು ನೀಡುತ್ತೇವೆ. ಯುವಕರ ಬ್ಯಾಂಕ್ ಖಾತೆಯಲ್ಲಿ ವರ್ಷಕ್ಕೆ 1 ಲಕ್ಷ ರೂಪಾಯಿ ಮತ್ತು ನಾವು ಕೋಟಿಗಟ್ಟಲೆ ಯುವಕರಿಗೆ ಈ ಹಕ್ಕುಗಳನ್ನು ನೀಡುತ್ತಿದ್ದೇವೆ ಎಂದರು.