ಧಾರವಾಡ: ಮೊನ್ನೆಯಷ್ಟೇ ಧಾರವಾಡದ ಹಾಶ್ಮಿನಗರದಲ್ಲಿ ನಡೆದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಗೊತ್ತಾಗಿದೆ.
ಫೈರೋಜ್ ಪಠಾಣ್ ಕೊಲೆಗೆ ಸಂಬಂಧಿಸಿದಂತೆ ನಿನ್ನೆಯಷ್ಟೊತ್ತಿಗೆ ಪೊಲೀಸರು 9 ಜನರನ್ನು ವಶಕ್ಕೆ ಪಡೆದು ಅವರನ್ನು ನ್ಯಾಯಾಲಯದ ಹಾಜರುಪಡಿಸಿದ್ದರು. ಸದ್ಯ ಒಂಬತ್ತೂ ಜನರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕೊಲೆಗೆ ಬಳಸಿದ ಎರಡು ಬೈಕ್ ಹಾಗೂ ಒಂದು ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕೊಲೆಗೆ ಸಂಬಂಧಿಸಿದಂತೆ ಮೊಹ್ಮದ್ ಷಾ, ಸೈಯದ್‌ಗೌಸ್ ಜಾನಿಷಾ, ಫರವೇಜ್ ಆಲಂ ಮಹಲ್ದಾರ, ಸಮೀರ್ ಅಹ್ಮದ್ ಮಕಾಂದಾರ್, ಸದ್ದಾಂಹುಸೇನ್ ನವಲಗುಂದ, ಖೈಫ್ ರೆಹಮಾನ್‌ಬಾಯಿ, ಅರಬಾಜ್ ಹಂಚಿನಾಳ, ಸೋಹಿಲ್‌ಖಾನ್ ಹಾಲಭಾವಿ ಹಾಗೂ ಮಕ್ತುಂ ಸೊಗಲದ ಎಂಬುವವರನ್ನು ಬಂಧಿಸಲಾಗಿದೆ. ಇದರಲ್ಲಿ ಮೊಹ್ಮದ್ ಷಾ ಹಾಗೂ ಕೊಲೆಗೀಡಾದ ಫೈರೋಜ್ ಪಠಾಣ್ ಮಧ್ಯೆ ವೈಯಕ್ತಿಕ ಸಂಘರ್ಷ ನಡೆದಿತ್ತು. ಕೊಲೆಗೀಡಾದ ಫೈರೋಜ್, ತಮಗೆ ಸಾಕಷ್ಟು ಕಿರಿಕಿರಿ ಮಾಡುತ್ತಿದ್ದ. ರಿಯಲ್ ಎಸ್ಟೇಟ್ ವಿಷಯದಲ್ಲೂ ಸಾಕಷ್ಟು ಕಿರಿಕಿರಿ ಮಾಡುತ್ತಿದ್ದ. ಹಲವು ಬಾರಿ ವೈಯಕ್ತಿಕ ಜಗಳ ನಡೆದು ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದ್ದವು. ಇದೇ ವಿಷಯ ಕೊಲೆಗೆ ಕಾರಣ ಎಂಬುದನ್ನು ಮೊಹ್ಮದ್ ಷಾ ಹೇಳಿದ್ದಾನೆ.
ಈ ಕುರಿತು ನಾವು ಇನ್ನೂ ಹೆಚ್ಚಿನ ವಿಚಾರಣೆ ಮತ್ತು ತನಿಖೆ ನಡೆಸಿದ್ದೇವೆ. ಈ ಕೊಲೆ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತರಲ್ಲಿ ಕೆಲವರು ಕ್ರಿಮಿನಲ್ ಹಿನ್ನೆಲೆ ಇರುವವರೂ ಇದ್ದಾರೆ. ಈ ಕೊಲೆ ಮಾಡಲು ಫೈರೋಜನನ್ನು ಆರೋಪಿಗಳು ಹಲವು ದಿನಗಳಿಂದ ವಾಚ್ ಮಾಡುತ್ತಿದ್ದರು. ಫೈರೋಜ್‌ನ ಮದುವೆ ಇದ್ದ ಕಾರಣ ಆತ ಹುಡುಗರನ್ನು ಕರೆದುಕೊಂಡು ಓಡಾಡುತ್ತಿದ್ದ. ಆದರೆ, ಆರೋಪಿಗಳು ಫೈರೋಜ್ ಹುಡುಗರನ್ನು ಕರೆದುಕೊಂಡು ತಿರುಗಾಡುತ್ತಿದ್ದಾನೆ ಎಂದು ತಿಳಿದುಕೊಂಡಿದ್ದರು. ಫೈರೋಜ್‌ನನ್ನು ಕೊಲೆ ಮಾಡಲು ಆರೋಪಿಗಳು ಕೆಲ ದಿನಗಳಿಂದಲೇ ತಯಾರಿ ಮಾಡಿಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಕಳೆದ ಶುಕ್ರವಾರ ಫೈರೋಜನ ಮನೆಗೆ ಹೋದ ಆರೋಪಿಗಳು ಮನೆಯಲ್ಲಿ ಗಂಡು ಮಕ್ಕಳು ಯಾರೂ ಇಲ್ಲದ್ದನ್ನು ಗಮನಿಸಿ ಕೊಲೆ ಮಾಡಿದ್ದಾರೆ. ಮೊದಲಿಗೆ ಇವರೆಲ್ಲ ಸೇರಿಕೊಂಡು ಪ್ಲ್ಯಾನ್ ಕೂಡ ಮಾಡಿದ್ದರು ಎಂದು ಗೊತ್ತಾಗಿದೆ. ಸದ್ಯ 9 ಜನರನ್ನು ಬಂಧಿಸಿರುವ ಪೊಲೀಸರು ಈ ಘಟನೆ ಸಂಬಂಧ ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


