ಅಥಣಿ: ವಿಜ್ಞಾನ ಮತ್ತು ತಂತ್ರಜ್ಞಾನ ಬೆಳದಂತೆ ಹೊಸ ಆವಿಷ್ಕಾರಗಳನ್ನು, ಹೊಸ ವಿಷಯಗಳನ್ನು ಕಲಿಯುವುದು ಅಗತ್ಯ. ಪ್ರತಿಯೊಂದು ರಂಗದಲ್ಲಿ ಎಐ ತಂತ್ರಜ್ಞಾನ ಕೆಲಸ ಮಾಡುತ್ತಿದೆ.ಅದಕ್ಕಾಗಿ ಮಕ್ಕಳಿಗೆ ದೂರದೃಷ್ಟಿ ಇಟ್ಟುಕೊಂಡು ನಮ್ಮ ಮಾತೃಭಾಷೆ ಕನ್ನಡ ಭಾಷೆ ಕಲಿಯುವುದರ ಜೊತೆಗೆ ಇಂಗ್ಲೀಷ ಭಾಷೆಯನ್ನು ಕಲಿಯುವುದು ಕೂಡ ಅಗತ್ಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಿನ ದೇಸಾಯರಹಟ್ಟಿ ಗ್ರಾಮದ ನಮ್ಮೂರು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 79 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ” ಅಮೃತ ಮಹೋತ್ಸವ ಕಾರ್ಯಕ್ರಮ” ವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಮತ್ತು ನಮ್ಮ ಬದುಕಿಗೆ ಅಗತ್ಯವಿರುವ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ.ಇಂದು ವೈದ್ಯಕೀಯ, ತಂತ್ರಜ್ಞಾನ, ಶಿಕ್ಷಣ, ಸಿನೆಮಾ, ಜೋತಿಷ್ಯ ಸೇರಿದಂತೆ ಕೃಷಿ ಕ್ಷೇತ್ರದಲ್ಲಿಯೂ ಎಐ ತಂತ್ರಜ್ಞಾನ ಕೆಲಸ ಮಾಡುತ್ತಿದೆ. ಇದರಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ನಿಖರವಾದ ಫಲಿತಾಂಶ ದೊರಕುತ್ತಿದೆ. ಇದನ್ನು ನಮ್ಮ ಗ್ರಾಮೀಣ ಪ್ರದೇಶದ ರೈತಾಪಿ ಮಕ್ಕಳು ಕಲಿಯಬೇಕಾದರೆ ಅವರಿಗೂ ಕೂಡ ಗುಣಮಟ್ಟದ ಶಿಕ್ಷಣ, ಆಂಗ್ಲ ಮಾಧ್ಯಮದ ಕಲಿಕೆ ಅಗತ್ಯವಾಗಿದೆ. ಆದ್ದರಿಂದ ನಾನು ತಾಲೂಕಿನ 11 ಗ್ರಾಮದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಇದಲ್ಲದೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 9 ಪ್ರಾಥಮಿಕ ಶಾಲೆಗಳನ್ನು ಉನ್ನತಿಕರಿಸಿ ಪ್ರೌಢಶಾಲೆಗಳನ್ನು ಆರಂಭಿಸಲಾಗಿದೆ ಎಂದರು.
ದೇಸಾಯರಹಟ್ಟಿ ಗ್ರಾಮದ ಈ ಪ್ರಾಥಮಿಕ ಶಾಲೆಯನ್ನು ಬರುವ ಶೈಕ್ಷಣಿಕ ವರ್ಷದಿಂದ ಉನ್ನತೀಕರಿಸಿ ಪ್ರೌಢಶಾಲೆಯನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಡ ಹಾಗೂ ಮಧ್ಯಮ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಕೇಂದ್ರೀಯ ಮಹಾವಿದ್ಯಾಲಯ ಆರಂಭಗೊಂಡಿದೆ. ಈಗಾಗಲೇ ಪ್ರವೇಶಾತಿಗಳು ಆರಂಭವಾಗಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಬೇಕು.
ಪಶು ವೈದ್ಯಕೀಯ ಮಹಾವಿದ್ಯಾಲಯ 2 ವರ್ಷಗಳನ್ನು ಪೂರೈಸಿ, ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಶೀಘ್ರದಲ್ಲಿಯೇ ಕೃಷಿ ಮಹಾವಿದ್ಯಾಲಯಕ್ಕೆ ಭೂಮಿ ಪೂಜೆ ನೇರವೇರಿಸಲಾಗುವುದು. ಒಟ್ಟಾರೆ ತಾಲೂಕಿನ ರೈತರ ಮಕ್ಕಳಿಗೆ ಗುಣಮಟ್ಟದ ಮತ್ತು ಉನ್ನತ ಶಿಕ್ಷಣ ದೊರಕಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದರು.
ದೇಸಾಯರಹಟ್ಟಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು 79 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವದು ಬಹಳ ಸಂತಸ ಮತ್ತು ಹೆಮ್ಮೆಯ ವಿಚಾರ. ಈ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಶಾಂತಯ್ಯ ಹಿರೇಮಠ ಬಹಳ ಆಸಕ್ತಿ ವಹಿಸಿ ಶಾಲೆಯಲ್ಲಿ ಒಳ್ಳೆಯ ಕಲಿಕಾ ವಾತಾವರಣ ಮತ್ತು ಪರಿಸರ ವೃದ್ಧಿ ಮೂಡಿಸಿರುವ ಕಾರ್ಯ ಅತ್ಯಂತ ಶ್ಲಾಘನೀಯ. ಅವರ ಈ ಕಾರ್ಯ ಅನೇಕ ಶಿಕ್ಷಕರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದ ಹಿರಿಯ ಮುಖಂಡ ಸಿದ್ದರಾಮ ಕಳಸಣ್ಣವರ ಮಾತನಾಡಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಯವರಿಗೆ ಮಾತ್ರ ಶಿಕ್ಷಣ ನಡಿಯುತ್ತಿದ್ದು, 9 ಮತ್ತು 10ನೇ ತರಗತಿಗಾಗಿ ಗ್ರಾಮದ ಹೆಣ್ಣು ಮಕ್ಕಳು ಬೇರೆ ಕಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಸಾರಿಗೆ ಸೌಲಭ್ಯ ಇಲ್ಲದೆ ಇರುವುದರಿಂದ. ಇದೆ ಶಾಲೆಯನ್ನು
ಉನ್ನತೀಕರಿಸಿ ಪ್ರೌಢಶಾಲೆ ಮಂಜೂರು ಮಾಡಿದರೆ ಬಹಳಷ್ಟು ಅನುಕೂಲವಾಗುತ್ತದೆ. ಬರುವ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆಯನ್ನ ಮಂಜೂರು ಮಾಡಬೇಕು. ಸಾರಿಗೆ ಬಸ್ ಸೌಲಭ್ಯವನ್ನು ಒದಗಿಸಬೇಕು, ತೋಟದ ವಸತಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು, ಗ್ರಾಮದೇವರ ದೇವಸ್ಥಾನಕ್ಕೆ ಒಂದು ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಚಿಕ್ಕೋಡಿ ಜಿಲ್ಲಾ ಉಪ ನಿರ್ದೇಶಕ ಸೀತಾರಾಮ ಆರ್. ಎ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. 79 ವರ್ಷಗಳಿಂದ ಈ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನ ಕಲಿಸುವ ಮೂಲಕ ಇಂದು ಅಮೃತ ಮಹೋತ್ಸವ ಆಚರಿಸುತ್ತಿರುವುದು ಬಹಳ ಸಂತೋಷ ಮತ್ತು ಹೆಮ್ಮೆಯ ವಿಚಾರ. ಶಾಲೆಯಲ್ಲಿ ಸುಂದರ ಪರಿಸರ, ಕಲಿಕಾ ಗುಣಮಟ್ಟ ಸುಧಾರಿಸುವ ಶಿಕ್ಷಕರು ಇಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಈ ಶಾಲೆಯನ್ನು ಶಾಸಕರ ಮಾರ್ಗದರ್ಶನದಂತೆ ಉನ್ನತಿಕರಿಸಿ ಪ್ರೌಢಶಾಲೆ ಮಾಡಲಾಗುವುದು ಎಂದರು.
ಖಾಸಗಿ ಶಾಲೆಗಳ ಅಬ್ಬರ ಮತ್ತು ಇಂಗ್ಲಿಷ್ ವ್ಯಾಮೋಹಕ್ಕಾಗಿ ಅನೇಕ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಿಲ್ಲ. ಪಾಲಕರು ಜಾಗೃತ ವಾಗಬೇಕು. ವ್ಯಾಮೋಹಕ್ಕೆ ಬಲಿಯಾಗದೆ ಮಕ್ಕಳಿಗೆ ಮಾತ್ರ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ಸರ್ಕಾರಿ ಶಾಲೆಗಳಿಗೆ ಎಲ್ಲರೂ ಕೂಡ ಮಕ್ಕಳನ್ನು ಕಳುಹಿಸುವ ಮೂಲಕ ಉಚಿತ ಶಿಕ್ಷಣ ಹಾಗೂ ಅನೇಕ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಡಾ. ಮಹಾಂತಪ್ರಭು ಸ್ವಾಮಿಜಿ ಮಾತನಾಡಿ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಮತ್ತು ಆತ್ಮವಿಶ್ವಾಸವನ್ನ ತುಂಬಬೇಕಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸುಂದರ ಬದುಕು ಕಟ್ಟಿಕೊಳ್ಳುವ ಶಿಕ್ಷಣ ನೀಡಬೇಕಾಗಿದೆ. ಖಾಸಗಿ ಶಾಲೆಗಳ ಭರಾಟೆಗೆ ನಡುವೆ ಈ ಗ್ರಾಮದ ಸರ್ಕಾರಿ ಶಾಲೆ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ಬೆಳವಣಿಗೆಯಾಗಿದೆ. ಈ ಶಾಲೆ ಮುಂಬರುವ ದಿನಗಳಲ್ಲಿ ಪ್ರೌಢಶಾಲೆಯಾಗಿ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸಂತೋಷ ಯಾದವ, ಕಾಂಗ್ರೆಸ್ ಮುಖಂಡ ಶಾಮ ಪೂಜಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸಿದ್ದರಾಮ ಲೋಕನ್ನವರ, ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ, ಶಿಕ್ಷಣ ಸಂಯೋಜಕ ಎಸ್. ವೈ ಗಸ್ತಿ, ಸಂಪನ್ಮೂಲ ಅಧಿಕಾರಿ ಎ. ವೈ ಹೈಬತ್ತಿ, ಎಂ. ಎಚ್ ಜುಲಪಿ, ನ್ಯಾಯವಾದಿ ಎ. ಎಂ ಖೋಬ್ರಿ, ಜೆ. ಎಂ ಹಿರೇಮಠ, ಗ್ರಾಮದ ಹಿರಿಯರಾದ ಖoಡು ಪವಾರ, ಅಪ್ಪಸಾಹೇಬ ಅವಟಿ, ನಾರಾಯಣ ಸಾವಂತ, ಭೈರಪ್ಪ ಪವಾರ, ಶಿವಾಜಿ ನಿಕ್ಕಂ, ಅಪ್ಪಾಸಾಹೇಬ ಚವ್ಹಾಣ, ರಾಮ ಚೌವ್ಹಾಣ, ಎಸ್ ಡಿ ಎಂ ಸಿ ಸದಸ್ಯರು, ಶಾಲಾ ಶಿಕ್ಷಕರು ಮತ್ತು ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

