ಬೆಳಗಾವಿ,ಏಪ್ರಿಲ್ 15: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಕುಟುಂಬ ಸದಸ್ಯರ ಜೊತೆಗೂಡಿ ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮೃಣಾಲ್ ಹೆಬ್ಬಾಳ್ಕರ್ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಮೃಣಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ನಡೆದ ಮೆರವಣಿಗೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಿಪಿಎಡ್ ಮೈದಾನದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿತು. ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಾರಾಷ್ಟ್ರದ ಶಾಸಕ ಧೀರಜ್ ದೇಶ್ಮುಖ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ರಾಜು ಸೇಠ್, ರಾಜು ಕಾಗೆ, ವಿನಯ ನಾವಲಗಟ್ಟಿ, ಲಕ್ಷ್ಮಣ ರಾವ್ ಚಿಂಗಳೆ, ಶಶಿಕಾಂತ ನಾಯಕ ಸೇರಿದಂತೆ ಜಿಲ್ಲೆಯ ಶಾಸಕರು, ಪ್ರಮುಖರು ನಾಮಪತ್ರ ಸಲ್ಲಿಕೆ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ರಂಗು ನೀಡಿದರು.
ರಸ್ತೆಯುದ್ದಕ್ಕೂ ನೆರೆದಿದ್ದ ಕಾಂಗ್ರೆಸ್ ಪಕ್ಷದ ಬೆಂಬಲಿಗರು, ಮೃಣಾಲ್ ಹೆಬ್ಬಾಳ್ಕರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಜೈಕಾರ ಕೂಗಿದರು. ಈ ವೇಳೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ನಾಲ್ಕು ಬಾರಿ ನಾಮಪತ್ರ ಸಲ್ಲಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಮೊದಲ ಸೆಟ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರೆ, ಎರಡನೇ ಬಾರಿಗೆ ಸಲ್ಲಿಸುವಾಗ ರಾಮದುರ್ಗದ ಶಾಸಕ ಅಶೋಕ್ ಪಟ್ಟಣ್, ಬೈಲಹೊಂಗಲದ ಶಾಸಕ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಹಾಜರಿದ್ದರು. ಮೂರನೇ ಬಾರಿಗೆ ನಾಮಪತ್ರ ಸಲ್ಲಿಸುವಾಗ ಶಾಸಕರಾದ ಲಕ್ಷ್ಮಣ್ ಸವದಿ, ಮಹಾರಾಷ್ಟ್ರ ದ ಕಾಂಗ್ರೆಸ್ ಶಾಸಕ ಧೀರಜ್ ದೇಶ್ಮುಖ್, ರಾಜು ಕಾಗೆ ಉಪಸ್ಥಿತರಿದ್ದರೆ, ನಾಲ್ಕನೇ ಬಾರಿಗೆ ನಾಮಪತ್ರ ಸಲ್ಲಿಸುವಾಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ್ ವೈದ್ಯ, ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹಾಗು ಗೋಕಾಕ್ ಕ್ಷೇತ್ರದ ಮುಖಂಡ ಮಹಾಂತೇಶ ಕಡಾಡಿ ಉಪಸ್ಥಿತರಿದ್ದರು.
ಸುಮಾರು ಒಂದೂವರೆ ಕಿಲೋಮೀಟರ್ ಸಾಗಿದ ಬೃಹತ್ ಮೆರವಣಿಗೆಯಲ್ಲಿ ಜನಸ್ತೋಮ, ಕಲಾ ತಂಡಗಳ ಮೆರಗು, ಕಾಂಗ್ರೆಸ್ ಧ್ವಜಗಳ ಹಾರಾಟದಿಂದಾಗಿ ಬೆಳಗಾವಿ ಸಂಪೂರ್ಣ ಕಾಂಗ್ರೆಸ್ ಮಯವಾಗಿತ್ತು, ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರ ಭಾವಚಿತ್ರಗಳನ್ನು ಹಿಡಿದು ಸಾಗಿದ ಕಾರ್ಯಕರ್ತರ ಹೆಗಲ ಮೇಲೆ ಕಾಂಗ್ರೆಸ್ ಧ್ವಜಗಳು ರಾರಾಜಿಸಿದವು. ಖಡು ಬೇಸಿಗೆಯ ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೇ ಅಪಾರ ಸಂಖ್ಯೆಯ ಬೆಂಬಲಿಗರು ಬೆಳಗಾವಿಗೆ ಆಗಮಿಸಿದ್ದರು.
ನಾಮಪತ್ರ ಸಲ್ಲಿಕೆ ವೇಳೆ ಬೆಳಗಾವಿಯಲ್ಲಿ ಕಂಡು ಬಂದ ಜನ ದಟ್ಟಣೆ ಚುನಾವಣೆಗೆ ಮುನ್ನವೇ ಪಕ್ಷದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಪಕ್ಷದ ಚಿಹ್ನೆ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ರ್ಯಾಲಿ ಮುಕ್ತಾಯಗೊಂಡ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚುನಾವಣೆ ರ್ಯಾಲಿ ಮುಕ್ತಾಯಗೊಂಡಿದೆ. ಮೇ 7 ರವರೆಗೂ ವಿಜಯಯಾತ್ರೆ ನಡೆಸಬೇಕಿದೆ. ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಕರೆ ನೀಡಿದರು. ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳನ್ನು ಮರುವಶಕ್ಕೆ ಪಡೆಯಲು ಒಗ್ಗಟ್ಟಿನಿಂದ ಹೋರಾಡೋಣ ಎಂದು ಸಚಿವರು ಹೇಳಿದರು.
ಕಾರ್ಯಕರ್ತರ ಉತ್ಸಾಹ ನೋಡಿದರೆ ಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಮೃಣಾಲ್ ಹೆಬ್ಬಾಳಕರ್ ಗೆಲುವು ಖಚಿತ ಎನ್ನುವ ವಿಶ್ವಾಸ ಮೂಡಿದೆ ಎಂದು ಅವರು ಹೇಳಿದರು.
ನಾಮಪತ್ರ ಸಲ್ಲಿಕೆಗೆ ಗಣ್ಯರ ದಂಡೇ ಹರಿದು ಬಂತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕರಾದ ಲಕ್ಷ್ಮಣ್ ಸವದಿ, ಪ್ರಕಾಶ್ ಹುಕ್ಕೇರಿ, ರಾಜು ಕಾಗೆ, ವಿಶ್ವಾಸ ವೈದ್ಯ, ಮಹಾಂತೇಶ್ ಕೌಜಲಗಿ, ಅಶೋಕ್ ಪಟ್ಟಣ್, ರಾಜು ಸೇಠ್, ಮಹಾರಾಷ್ಟ್ರದ ಲಾತೂರ್ ಶಾಸಕ ಧೀರಜ್ ದೇಶಮುಖ್, ಚನ್ನರಾಜ ಹಟ್ಟಿಹೊಳಿ, ಮುಖಂಡರಾದ ಮಹಾಂತೇಶ್ ಕಡಾಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ, ಲಕ್ಷ್ಮಣ ರಾವ್ ಚಿಂಗಳೆ, ಮಾಜಿ ಸಚಿವ ಶಶಿಕಾಂತ ನಾಯಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.