ಬಳ್ಳಾರಿ. ಏ. 13..: ದೇವರು ಮನದಲ್ಲಿರಿಸಿಕೊಂಡು ಯಾವುದೇ ಕೆಲಸ, ದಾನ, ನಡೆ ನುಡಿಗಳನ್ನು ಶುದ್ಧ ಮನಸ್ಸಿನಿಂದ ಮಾಡಿದರೆ ಮಾತ್ರ ಜೀವನ ಸ್ವರ್ಗವಿದ್ದಂತೆರುತ್ತದೆ ಎಂದು ಶ್ರೀಕೊಪ್ಪಳ ಗವಿ ಮಠದ ಅಭಿನವ ಗವಿ ಸಿದ್ಧೇಶ್ವರ ಸ್ವಾಮಿ ಹೇಳಿದರು.
ಅವರು ತಾಲೂಕಿನ ಹಂದಿಹಾಳು ಗ್ರಾಮದ ಜಡೆಸಿದ್ಧೆಶ್ವರ ಮಠದ ಆವರಣದಲ್ಲಿ ಜಡೆಸಿದ್ಧೇಶ್ವರ ರಥೋತ್ಸವ ಹಿನ್ನೆಲೆ ಪ್ರವಚನ ನೀಡುತ್ತಾ ಮಾತನಾಡಿ, ಧರ್ಮೋ ರಕ್ಷಿತ ರಕ್ಷಿತಹ ಎನ್ನುವಂತೆ ಧರ್ಮದ ದಾರಿಯಲ್ಲಿ ನಡೆಯುವುದನ್ನು ಕಲಿಯಿರಿ ಅದು ನಿಮ್ಮನ್ನು ರಕ್ಷಿಸುತ್ತದೆ . ನಾನು ಎಂಬ ಅಹಂಕಾರ ಬಿಟ್ಟಲ್ಲಿ ಮಾತ್ರ ಜೀವನದಲ್ಲಿ ನೆಮ್ಮದಿ ಸುಖ ಶಾಂತಿಗಳನ್ನು ಕಾಣಲು ಸಾಧ್ಯ,. ಕಾಲ ಕೆಟ್ಟು ಹೋಗಿದೆ ಎನ್ನುವ ಮನುಜರು ಮೊದಲು ಕೆಟ್ಟು ಹೋದ ಅವರ ಮನಸ್ಸು, ಭಾವನೆಗಳ ದೃಷ್ಟಿಕೋನವನ್ನು ಬದಲಿಸಿಕೊಳ್ಳುವುದನ್ನು ಕಲಿಯಿರಿ ಎಂದು ಹೇಳಿದರು.
ಜೀವನದಲ್ಲಿ ಮನುಷ್ಯನಿಗೆ ದುಃಖ ಯಾಕೆ ಆಗುತ್ತದೆ ಎಂದರೆ ಇರುವುದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳದಿರುವುದೇ ಮೂಲ ಕಾರಣವಾಗಿದೆ ಎಂದರು.
ಶ್ರೀಧರಗಡ್ಡೆ ಶಾಖಾ ವಿರಕ್ತ ಮಠದ ಮರಿ ಕೊಟ್ಟೂರು ಸ್ವಾಮಿ ಮಾತನಾಡಿದರು.
ಆಂಜನೇಯ ಸ್ವಾಮಿ ದೇವಾಲಯದಿಂದ ಜಡೆಸಿದ್ಧೆಶ್ವರ ಮಠದ ವರೆಗೆ ಶ್ರೀಕೊಪ್ಪಳ ಗವಿ ಮಠದ ಅಭಿನವ ಗವಿ ಸಿದ್ಧೇಶ್ವರ ಸ್ವಾಮಿ ಹಾಗೂ ಶ್ರೀಧರಗಡ್ಡೆ ಶಾಖಾ ವಿರಕ್ತ ಮಠದ ಮರಿ ಕೊಟ್ಟೂರು ಸ್ವಾಮಿ ಅವರನ್ನು ಭಜನೆ ಮೂಲಕ ಸ್ವಾಗತಿಸಲಾಯಿತು. ಕ್ಷೇತ್ರದ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದ ಸಾರ್ವಜನಿಕರಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು, ಭಕ್ತ ಸಮೋಹ, ಸುತ್ತ ಮುತ್ತಲಿನ ಗ್ರಾಮಗಳಿಂದ ಬಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


