ವಿಜಯಪುರ,ಏ.೧1: ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ.ಆದಾಗ್ಯೂ ಜಿಲ್ಲಾಡಳಿತ ಜಿಲ್ಲೆಯಲ್ಲಿ ಉಲ್ಬಣಿಸಬಹುದಾದ ತಾಲೂಕುಗಳಲ್ಲಿ ಪರ್ಯಾಯ ಜಲಮೂಲಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಜಾನಕಿ ಜಿಲ್ಲಾಡಳಿತಕ್ಕೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೇಸಿಗೆಯಲ್ಲಿ ಕುಡಿಯುವ ನೀರು ನಿರ್ವಹಣೆ ಹಾಗೂ ಭೂಸುರಕ್ಷಾ ಯೋಜನೆಯಡಿ ಬಾಕಿಯಿರುವ ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೇಸಿಗೆಯಲ್ಲಿ ಜನತೆಯ ಜನ ಜಾನುವಾರುಗಳ ಹಿತದೃಷ್ಟಿಯಿಂದ ಜಿಲ್ಲೆಯ ಕೆರೆಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ತುಂಬಿಸಬೇಕು ಎಂದು ರೈತರು ಒತ್ತಾಯಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಕೃಷ್ಣಾ ಭಾಗ್ಯ ಜಲನಿಗಮದ ಅಣೆಕಟ್ಟು ವೃತ್ತದ ಅಧಿಕಾರಿಗಳು ತಾಂತ್ರಿಕ ವರದಿ ಸಲ್ಲಿಸಿದ್ದರು. ಆ ವರದಿಯನುಸಾರ ಜಲಾಶಯದಲ್ಲಿ ಬಾಕಿ ಉಳಿದಿರುವ ೪.೨೩೧ ಟಿಎಂಸಿ ನೀರಿಬ ಪೈಕಿ ೨.೩೦ ಟಿಎಂಸಿ ಇನೀರನ್ನು ಏ. ೧೦ ರಿಂದ ಏ. ೩೦ರವರೆಗೆ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ಭಾಗ್ಯ ಜಲನಿಗಮದ ಕಾಲುವೆಗಳ ಮೂಲಕ ಜಲಸಂಗ್ರಹಾಲಯ ಜಾಲಗಳಿಗೆ ಹರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಆದರೆ ಕಾಲುವೆ ಜಾಲಕ್ಕೆ ಹರಿಸಲಾಗುವ ಈ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರವೇ ಬಳಸಬೇಕು. ಬದಲಿಗೆ ಅನ್ಯ ಉದ್ದೇಶಕ್ಕೆ ಬಳಕೆಸುವಂತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಣ್ಗಾವಲಿಡಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಜಾನಕಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಲಧಾರೆ ಯೋಜನೆ ಪೂರ್ಣಗೊಳಿಸಿ: ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿರುವ ಮಹತ್ವಾಕಾಂಕ್ಷಿಯ ಜಲಧಾರೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ವಿಶೇಷ ಆಸಕ್ತಿ ತೆಗೆದುಕೊಂಡು, ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ತಾಂತ್ರಿಕ ಮತ್ತಿತರೆ
ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ, ಯುದ್ಧೋಪಾದಿಯಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕು. ಈ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಭೂಸುರಕ್ಷಾ ಯೋಜನೆಗೆ ಕೈಜೋಡಿಸಿ: ಭೂದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ರಕ್ಷಿಸುವ ಹಾಗೂ ನಾಗರಿಕರಿಗೆ ಸುಲಭವಾಗಿ ಲಭ್ಯಗೊಳಿಸುವ ಸರ್ಕಾರದ ಮಹತ್ವಾಕಾಂಕ್ಷಿ ಭೂಸುರಕ್ಷಾ ಯೋಜನೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಆಯುಕ್ತರಾದ ಜಾನಕಿ ಹೇಳಿದರು.
ಎಲ್ಲ ಹಳೆಯ ಭೂ ದಾಖಲೆಗಳನ್ನು ತ್ವರಿತಗತಿಯಲ್ಲಿ ಡಿಜಿಟಲೀಕರಣಗೊಳಿಸಬೇಕು. ತನ್ಮೂಲಕ ಭೂ ದಾಖಲೆಗಳನ್ನು ರೈತರಿಗೆ ತ್ವರಿತವಾಗಿ ನೀಡುವನಿ ಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕು ಎಂದರು. ಈ ನಿಟ್ಟಿನಲ್ಲಿ ರೈತರು ಹಾಗೂ ಸಾರ್ವಜನಿಕರು ಭೂ ದಾಖಲೆ ಕಚೇರಿಗೆ ಅಲೆದಾಡುವುದರ ಬದಲಿಗೆ ಆನ್‌ಲೈನ್ ಮೂಲಕ ಮಾಹಿತಿ ಹಾಗೂ ದಾಖಲೆಗಳನ್ನು ಪಡೆಯಲು ಅಧಿಕಾರಿಗಳು ಸಾರ್ವಜನಿಕರಲ್ಲಿ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರ್‌ರು, ಆಲಮಟ್ಟಿ ಅಣೆಕಟ್ಟು ವೃತ್ತದ ಕೆಬಿಜೆಎನ್ ಎಲ್ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.


