ಅಥಣಿ : ವಿದ್ಯಾರ್ಥಿಗಳು ಛಲ, ಶ್ರದ್ಧೆ ಹಾಗೂ ಸತತ ಪರಿಶ್ರಮ ಹೊಂದಿದ್ದಲ್ಲಿ ಮಾತ್ರ ಬದುಕಿನಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ಹಂತ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ನಿರಂತರ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಜೆ ಎ ಕಾಲೇಜಿನ ವಿದ್ಯಾರ್ಥಿ ಶಿವಾನಂದ ಬುರ್ಲಟ್ಟಿ ಕಲಾ ವಿಭಾಗದಲ್ಲಿ 595 ಅಂಕಗಳನ್ನು ಪಡೆದು ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದಿರುವುದರಿಂದ ಆ ವಿದ್ಯಾರ್ಥಿಗೆ ಸನ್ಮಾನಿಸಿ ಮಾತನಾಡಿದರು. ಸತತ ಪರಿಶ್ರಮ, ಛಲ ಮತ್ತು ಶ್ರದ್ಧೆಯು ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಮತ್ತು ಸಾಧನೆಗೆ ಪ್ರಮುಖ ಮೂಲಾಧಾರಗಳಾಗಿವೆ. ಗುರಿಯ ಮೇಲೆ ದೃಢ ನಿರ್ಧಾರವಿಟ್ಟು, ನಿರಂತರವಾಗಿ ಶ್ರಮಿಸಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು, ಸೋಲಿಗೆ ಹೆದರದೆ, ಆತ್ಮವಿಶ್ವಾಸದಿಂದ ಕಠಿಣ ಪರಿಶ್ರಮ ಪಟ್ಟಾಗ ಅಸಾಧ್ಯವಾದುದೂ ಸಾಧ್ಯವಾಗುತ್ತದೆ. ವಿದ್ಯೆಯೊಂದಿಗೆ ಮಾನವೀಯ ಮೌಲ್ಯಗಳನ್ನು. ಪ್ರಾಮಾಣಿಕತೆಯನ್ನು ಮತ್ತು ಉನ್ನತ ಗುರಿಗಳನ್ನು ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು ವಿದ್ಯೆ ಕಲಿಸಲು ಹಗಲಿರುಳು ಶ್ರಮಿಸಿದ ತಂದೆ ತಾಯಿಗೆ ಗುರು ಬಳಗಕ್ಕೆ ಯಾವತ್ತೂ ಋಣಿಯಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀಶೈಲ ನಾಯಿಕ, ಹೊಳೆಪ್ಪ ಪೂಜಾರಿ, ಮುರಗೇಪ್ಪ ಕನಕರಡ್ಡಿ, ಮಲ್ಲು ಕುಲ್ಲೋಳ್ಳಿ, ಬರಮ್ಮಾ ಮಗಾಡಿ, ಮಂಜು ನೂಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


