ಬೆಳಗಾವಿ : ಜಾತಿ ರಾಜಕಾರಣ ಬೇಡ, ದ್ವೇಷದ ರಾಜಕಾರಣ ಬೇಡ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ರಾಜಕಾರಣ ಮಾಡುವ ಮೂಲಕ ಕ್ಷೇತ್ರವನ್ನು ರಾಮರಾಜ್ಯ ಮಾಡುವ ಕನಸು ಹೊಂದಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ತಾರಿಹಾಳ ಗ್ರಾಮದಲ್ಲಿ ಗುರುವಾರ ಸಂಜೆ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು. ಅಧಿಕಾರ ಇರಲಿ, ಇಲ್ಲದಿರಲಿ, ನಾನು ಒಂದೇ ರೀತಿ ಇರುತ್ತೇನೆ. ಎಂದಿಗೂ ಬದಲಾಗುವುದಿಲ್ಲ. ಜನರಿಂದ, ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಬೆಳೆದಿದ್ದೇವೆ, ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ನಡೆಯುತ್ತಿದ್ದೇನೆ. ಕೈಲಾಗುವುದಷ್ಟನ್ನೇ ಹೇಳುತ್ತೇನೆ, ಅದನ್ನು ಮಾಡುತ್ತೇನೆ. ಗಲ್ಲಿ ಗಲ್ಲಿಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.
ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮಾಜದ ನಾಯಕರಲ್ಲ, ಇಡೀ ವಿಶ್ವಕ್ಕೆ ರಾಮಾಯಣ ಕೊಟ್ಟಂತಹ ಧೀಮಂತರು. ತಂದೆ ಹೇಗಿರಬೇಕು, ಮಗ ಹೇಗಿರಬೇಕು, ಸಹೋದರ ಹೇಗಿರಬೇಕು, ಹೆಂಡತಿ ಹೇಗಿರಬೇಕು ಎನ್ನುವ ಬದುಕಿನ ಸಂದೇಶ ನೀಡುವ ಮಹಾನ್ ಗ್ರಂಥ ರಾಮಾಯಣದ ಸೃಷ್ಟಿಕರ್ತ ಅವರು. ಮಾತಿನಿಂದ ಅಲ್ಲ, ಕೃತಿಯಿಂದ ರಾಮಾಯಣ ಅನುಸರಿಸಬೇಕು. ರಾಮಾಯಣದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ರಾಮನಿಗೆ ಮರ್ಯಾದೆ ನೀಡಿದಂತಾಗುತ್ತದೆ. ವಾಲ್ಮೀಕಿ ಮೂರ್ತಿ ಸ್ಥಾಪನೆ ಸಾರ್ಥಕವಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮುಂದಿನ ಪೀಳಿಗೆಗೆ ಆದರ್ಶಗಳನ್ನು ತಲುಪಿಸಬೇಕೆನ್ನುವ ಕಾರಣದಿಂದ ಸ್ವಂತ ದುಡ್ಡಿನಿಂದ ಕ್ಷೇತ್ರಾದ್ಯಂತ ಬಾಬಾ ಸಾಹೇಬ ಅಂಬೇಡ್ಕರ್, ಕಿತ್ತೂರು ಚೆನ್ನಮ್ಮ, ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ, ಬಸವೇಶ್ವರ ಮೊದಲಾದ ಮಹಾನ್ ವ್ಯಕ್ತಿಗಳ ಪುತ್ಥಳಿಯನ್ನು ಸ್ಥಾಪಿಸುತ್ತಿದ್ದೇನೆ. ತನ್ಮೂಲಕ ದೇಶದ ಪರಂಪರೆ ಎನ್ನುವ ದೊಡ್ಡ ಆಸ್ತಿಯನ್ನು ರಕ್ಷಿಸುವ ಕೆಸ ಮಾಡುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.
ಜಾತ್ರೆಗೆ ಮುನ್ನ ಇಡೀ ತಾರಿಹಾಳ ಊರನ್ನು ಸ್ವಚ್ಛಗೊಳಿಸಿ, ಸುಂದರಗೊಳಿಸಲಾಗುವುದು. ಅತ್ಯಂತ ವೈಭವದಿಂದ, ಶ್ರದ್ಧಾ ಭಕ್ತಿಯಿಂದ ಜಾತ್ರೆಯನ್ನು ಆಚರಿಸೋಣ. ನಾನು ಕೂಡ ಭಾಗವಹಿಸುತ್ತೇನೆ ಎಂದು ಅವರು ತಿಳಿಸಿದರು.
ತೆರೆದ ವಾಹನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಗ್ರಾಮಸ್ಥರು ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಸುರೇಶ ಗೊರನ್ನವರ, ಮಂಜುನಾಥ ತಳವಾರ, ಮನೋಹರ ಬಾಂಡಗೆ, ನಿಂಗಪ್ಪ ತಲ್ಲೂರ, ಯಲ್ಲಪ್ಪ ತಳವಾರ, ಕಾಶಿನಾಥ ಕೋಲಕಾರ, ಪ್ರಮೋದ ಪಾಟೀಲ, ನಾಗಪ್ಪ ತಳವಾರ, ಮಾರುತಿ ತಳವಾರ, ಬಸವರಾಜ ತಳವಾರ, ಹೊಳೆಪ್ಪ ಪೂಜೇರ,ನಾಗಯ್ಯ ಪೂಜೇರ್, ಲಕ್ಷ್ಮಣ ಮುಚ್ಚಂಡಿ, ಚಾಂಗದೇವ ನೇಸರಕರ, ಪಾಂಡು ಖನಗಾಂವ್ಕರ್, ಅಡಿವೆಪ್ಪ ಜಳಕನ್ನವರ, ಪ್ರಶಾಂತ ಪಾಟೀಲ, ಪುಂಡಲೀಕ ನಾಯಕ, ವಿರೂಪಾಕ್ಷ ಇಟಗಿ, ಅನಿಲ ಪೂಜಾರ, ಬಸವರಾಜ ವಾಣಿ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.


