ಬೆಳಗಾವಿ: ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಂಸ್ಕಾರ, ಶಿಸ್ತು ಹಾಗೂ ಮೌಲ್ಯಾಧಾರಿತ ಶಿಕ್ಷಣ ಜವಾಬ್ದಾರಿ ಪಾಲಕರ ನೀಡುವ ಮೇಲಿದೆ ಎಂದು ನಿಡಸೋಸಿ ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಸಿ.ಕಮತೆ ಹೇಳಿದರು.
ಜಿಲ್ಲೆಯ ಗೋಕಾಕ ತಾಲೂಕಿನ ಸಾವಳಗಿ ಸಿದ್ದ ಸಂಸ್ಥಾನ ಮಠದಲ್ಲಿ ಜರುಗುತ್ತಿರುವ 2026ನೇ ಸಾಲಿನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು.
“ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಅವರ ಆಸಕ್ತಿ, ಸಾಮರ್ಥ್ಯ ಅರಿತು ಪ್ರೋತ್ಸಾಹ ನೀಡಬೇಕು. ಸಮಾಜಮುಖಿ ಚಿಂತನೆ ಹಾಗೂ ದೇಶಪ್ರೇಮದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಿದರೆ ಆರೋಗ್ಯಕರ ಸಮಾಜ ಸಾಧ್ಯ,”ಎಂದರು.
ಪ್ರಗತಿಪರ ರೈತ ಸುಧೀರ ಕತ್ತಿ ಕಬ್ಬು ಬೆಳೆ ಕುರಿತು ಮಾತನಾಡಿ, ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡರೆ ಕಬ್ಬಿನ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಉತ್ತಮ ಗುಣಮಟ್ಟದ ಬೀಜ, ಸಮರ್ಪಕ ಗೊಬ್ಬರ ನಿರ್ವಹಣೆ, ನೀರಾವರಿ ವ್ಯವಸ್ಥೆ ಹಾಗೂ ವೈಜ್ಞಾನಿಕ ವಿಧಾನ ಅನುಸರಿಸಿದರೆ ಪ್ರತಿ ಎಕರೆಗೆ 80ರಿಂದ 120 ಟನ್ ಕಬ್ಬು ಇಳುವರಿ ಪಡೆಯಲು ಸಾಧ್ಯ,”ಎಂದು ತಿಳಿಸಿದರು.
ಪೀಠಾಧಿಪತಿ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾನಾ ಗಣ್ಯರು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


