ದಾಲ್ಮಿಯಾ ಕಾರ್ಖಾನೆ ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ : ಬಾಲಚಂದ್ರ ಜಾರಕಿಹೊಳಿ

Chandrashekar Pattar
ದಾಲ್ಮಿಯಾ ಕಾರ್ಖಾನೆ ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ : ಬಾಲಚಂದ್ರ ಜಾರಕಿಹೊಳಿ
Oplus_16908288
WhatsApp Group Join Now
Telegram Group Join Now

ಮೂಡಲಗಿ : ಸಿಮೆಂಟ್ ವಲಯದಲ್ಲಿ ಹೆಸರುವಾಸಿಯಾಗಿರುವ ದಾಲ್ಮಿಯಾ ಸಿಮೆಂಟ್ ಭಾರತ ಲಿ. (ಡಿಸಿಬಿಎಲ್ ಯಾದವಾಡ ಯೂನಿಟ್ ) ಈ ಭಾಗದ ರೈತರು ಮತ್ತು ಸಾರ್ವಜನಿಕರ ಹಿತಕ್ಕೆ ಅನುಗುಣವಾಗಿ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಯಾದವಾಡ ಮತ್ತು ಕುಲಗೋಡದಲ್ಲಿ ನಿರ್ಮಾಣವಾಗುತ್ತಿರುವ ಬಸವೇಶ್ವರ ಪುತ್ಥಳಿ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಒಟ್ಟು 26 ಲಕ್ಷ ರೂಪಾಯಿಗಳನ್ನು ದೇಣಿಗೆಯನ್ನಾಗಿ ನೀಡುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹರ್ಷ ವ್ಯಕ್ತಪಡಿಸಿದರು.

ಬುಧವಾರದಂದು ಮೂಡಲಗಿ-ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಯಾದವಾಡ ಮತ್ತು ಕುಲಗೋಡ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ದಾಲ್ಮಿಯಾ ಕಾರ್ಖಾನೆಯವರು ನೀಡಿರುವ ಒಟ್ಟು 26 ಲಕ್ಷ ರೂಪಾಯಿ ಚೆಕ್ ವಿತರಿಸಿ ಮಾತನಾಡಿದ ಅವರು, ಕಾರ್ಖಾನೆಯವರು ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಅವರು ಹೇಳಿದರು. 2006-07 ರಲ್ಲಿ ಆಗಿನ ಗೋಕಾಕ ಮತ್ತು ಈಗಿನ ಮೂಡಲಗಿ ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ಆರಂಭಗೊಂಡಿರುವ ಡಾಲ್ಮಿಯಾ ಸಿಮೆಂಟ್ ಕಾರ್ಖಾನೆಗೆ ಈ ಭಾಗದ ರೈತರು ತಮ್ಮ ಜಮೀನುಗಳನ್ನು ನೀಡಿ ಕಾರ್ಖಾನೆ ನಿರ್ಮಾಣಕ್ಕೆ ಕಾರಣರಾದರು. ಸಾರ್ವಜನಿಕರು ಸಹ ಇದಕ್ಕೆ ಸಹಕಾರವನ್ನು ನೀಡಿದರು. ಕಾರ್ಖಾನೆ ಅಭಿವೃದ್ಧಿ ಜತೆಗೆ ಈ ಭಾಗದಲ್ಲಿ ಹಲವು ಸಾಮಾಜಿಕ ಚಟುವಟಿಕೆಗಳಿಗೆ ಕಾರ್ಖಾನೆಯು ತಮ್ಮದೇ ರೀತಿಯಲ್ಲಿ ಆರ್ಥಿಕವಾಗಿ ನೆರವು ನೀಡುತ್ತ ಬರುತ್ತಿದೆ. ಈ ಹಿಂದೆ 1 ಕೋಟಿ ರೂಪಾಯಿ ಹಣವನ್ನು ಯಾದವಾಡ ರಸ್ತೆ ನಿರ್ಮಾಣಕ್ಕೆ ನೀಡಿದೆ. ಕುಡಿಯುವ ನೀರಿನ ವ್ಯವಸ್ಥೆಗಾಗಿ 25 ಲಕ್ಷ ರೂಪಾಯಿ ಧನ ಸಹಾಯ ಮಾಡಿದೆ. ಯಾದವಾಡ ಸರ್ಕಾರಿ ಆಸ್ಪತ್ರೆಯ ನವೀಕೃತ ಕಟ್ಟಡ ಕಾಮಗಾರಿಗೆ 30 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದೆ. ಈಗ ಯಾದವಾಡ (ಕ್ರಾಸ್) ಸರ್ಕಲ್ ಹತ್ತಿರ ನಿರ್ಮಾಣವಾಗುತ್ತಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ 16 ಲಕ್ಷ ರೂಪಾಯಿ ನೀಡುತ್ತಿದೆ ಎಂದರು.

Oplus_16908288

ಕುಲಗೋಡ ಗ್ರಾಮದಲ್ಲಿ ಎಲ್ಲ ಹಿರಿಯರು ಒಂದಾಗಿ ಬಸ್ ನಿಲ್ದಾಣದ ಹತ್ತಿರ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯನ್ನು ನಿರ್ಮಾಣ ಮಾಡುತ್ತಿದ್ದು, ಇದರ ಕಾಮಗಾರಿಗೆ ಕಾರ್ಖಾನೆಯವರು 10 ಲಕ್ಷ ರೂಪಾಯಿ ವೆಚ್ಚವನ್ನು ಭರಿಸುತ್ತಿದ್ದಾರೆ‌. ಇಂತಹ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ರೈತರಿಗೆ ವರದಾನವಾಗಿ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿರುವ ದಾಲ್ಮಿಯಾ ಕಾರ್ಖಾನೆಯ ಕಾರ್ಯವನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕು ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಡಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಯಾದವಾಡದ ಯೂನಿಟ್ ಮುಖ್ಯಸ್ಥ ಪ್ರಭಾತ್ ಕುಮಾರ ಸಿಂಗ್, ಸಾಂಸ್ಥಿಕ ವಿಭಾಗ ಮುಖ್ಯಸ್ಥ ಉಮೇಶ ದೇಸಾಯಿ, ಹಣಕಾಸು ಮತ್ತು ಲೆಕ್ಕ ವಿಭಾಗದ ಮುಖ್ಯಸ್ಥ ಅರಬಿಂದಕುಮಾರ ಸಿಂಗ್, ಮುಖಂಡರಾದ ಪರ್ವತಗೌಡ ಪಾಟೀಲ, ಅಶೋಕ ನಾಯಿಕ, ಪುಟ್ಟಣ್ಣ ಪೂಜೇರಿ, ಗೋವಿಂದ ಕೊಪ್ಪದ, ಬಸನಗೌಡ ಪಾಟೀಲ, ಸುನೀಲ ನ್ಯಾಮಗೌಡ, ಸುಭಾಸ ಒಂಟಗೋಡಿ, ವೆಂಕಪ್ಪ ಚನ್ನಾಳ, ಸತೀಶ್ ಒಂಟಗೋಡಿ, ತಮ್ಮಣ್ಣ ದೇವರ, ಶಂಕರ್ ಹಾದಿಮನಿ, ಬಸವರಾಜ ಹಿಡ್ಕಲ್, ಕಾನೂನು ಸಲಹೆಗಾರ ರಮೇಶ ಮಳಲಿ ಸೇರಿದಂತೆ ಕುಲಗೋಡ್ ಹಾಗೂ ಯಾದವಾಡ ಗ್ರಾಮಗಳ ಅನೇಕ ಪ್ರಮುಖರು  ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article