ಧಾರವಾಡ: ‘ಲವ್ಜಿಹಾದ್ ಮೂಲಕ ಹಿಂದೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವ ಜಾಲ ಸಕ್ರಿಯವಾಗಿದ್ದು, ಹಿಂದೂ ಕುಟುಂಬಗಳು ಮತ್ತು ಯುವತಿಯರು ಇಂತಹ ವ್ಯಕ್ತಿಗಳ ಜಾಲಕ್ಕೆ ಬೀಳದಂತೆ ಜಾಗರೂಕರಾಗಿರಬೇಕು’ ಎಂದು ಯುವ ಬ್ರಿಗೇಡ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಮಂಗಳವಾರ ಸುಭಾಷ ರಸ್ತೆಯಲ್ಲಿ ನಡೆದ ಹಿಂದೂ ಯುವತಿಯರ ಮೇಲೆ ನಡೆಯುತ್ತಿರುವ ಲವ್ ಜಿಹಾದ್ ಖಂಡಿಸಿ ಜನಾಕ್ರೋಶ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಹಿಂದೂ ಸಮಾಜದ ಹೆಣ್ಣುಮಕ್ಕಳನ್ನು ಮುಸ್ಲಿಂ ಸಮುದಾಯದ ಯುವಕರು ಪುಸಲಾಯಿಸಿ, ಮತಾಂತರ ಮಾಡುತ್ತಿದ್ದಾರೆ. ಇದಕ್ಕೆ ಅಪ್ರಾಪ್ತ ಮಕ್ಕಳೂ ಬಲಿಯಾಗಿದ್ದಾರೆ. ಪೊಲೀಸ್ರು ಇಂತಹ ಘಟನೆಗಳನ್ನು ನಡೆಯದಂತೆ ಕಠಿಣ ಕ್ರಮ ಕೈಗೊಳಬೇಕು. ಇಲ್ಲದಿದ್ದರೆ ಹಿಂದೂ ಸಂಘಟಗಳು ಹೋರಾಟ ನಡೆಸಲಾಗುವುದು ಎಂದರು.
‘ಸಮೀರ್ ಮುಲ್ಲಾ ಕೇವಲ ಒಬ್ಬ ಯುವತಿಯನ್ನು ಮಾತ್ರವಲ್ಲದೆ, ಹಲವು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಅವನ ಮೊಬೈಲ್ನಲ್ಲಿ ಬೇರೆ ಬೇರೆ ಯುವತಿಯರೊಂದಿಗೆ ಇರುವ ಫೋಟೋಗಳು ಹಾಗೂ ವಿಡಿಯೋಗಳು ಲಭ್ಯವಾಗಿದ್ದು, ಆತನ ಪೊಲೀಸರಿಗೆ ಹಿಡಿದು ಕೊಟ್ಟ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದು ಖಂಡನೀಯ’ ಎಂದರು.
ಹುಬ್ಬಳ್ಳಿಯ ಕಾಲೇಜಿನಲ್ಲಿ ನೇಹಾ ಹಿರೇಮಠ ಎಂಬುವವರನ್ನು ಮುಸ್ಲಿಂ ಯುವಕ ಫಯಾಜ್ ಎಂಬಾತ ಪ್ರೀತಿಸುವಂತೆ ಪೀಡಿಸಿ ಹಾಡಹಗಲೇ ಕೊಲೆ ಮಾಡಿದ್ದು,ಪೊಲೀಸರಿಗೆ ಇಲ್ಲಿಯವರೆಗೂ ಸರಿಯಾಗಿ ಸಾಕ್ಷಿ ಸಿಗುತ್ತಿಲ್ಲ. ಆತ ಈಗ ಜೈಲಿನಲ್ಲಿ ಅರಾಮಾಗಿ ಕಾಲ ಕಳೆಯುತ್ತಿದ್ದಾನೆ ಎಂದು ದೂರಿದರು.
ಭಜರಂಗದಳ ಉತ್ತರ ಕರ್ನಾಟಕ ರಾಜ್ಯ ಸಹ ಸಂಚಾಲಕ ಶಿವಾನಂದ ಸತ್ತಿಗೇರಿ ಮಾತನಾಡಿ, ಪ್ರೀತಿ ನೆಪದಲ್ಲಿ ಹಿಂದೂ ಯುವತಿಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಹೆಣ್ಣುಮಕ್ಕಳ ತರಬೇತಿ ನೀಡುವ ಜಿಮ್ನಲ್ಲಿ ಮಾಲೀಕರು ಪ್ರತ್ಯೇಕ ಮಹಿಳಾ ತರಬೇತಿದಾರರನ್ನು ನೇಮಿಸಬೇಕು. ಮಹಿಳೆಯರಿಗೆ ಪುರುಷರು ತರಬೇತಿ ನೀಡಬಾರದು. ಇಂತಹದ್ದು ಕಂಡು ಬಂದರೆ ಬಜರಂಗದಳದಿಂದ ದಾಳಿ ಮಾಡಲಾಗುವುದು ಎಂದರು.
ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾತ್ಯದ ಮುಖ್ಯಸ್ಥ ಡಾ. ಎಸ್.ಆರ್.ರಾಮನಗೌಡರ, ಮಹೇಶ ಪಾಟೀಲ, ದೀಪಕ ಆಕಳವಾಡಿ ಉಪಸ್ಥಿತರಿದ್ದರು.


