ವಿಜಯನಗರ(ಹೊಸಪೇಟೆ) ಏ.08: ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವ ನಿಟ್ಟಿನಲ್ಲಿ ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳ ಕೊರತೆಯಾಗದಂತೆ ಸಕಾಲದಲ್ಲಿ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಕೃಷಿ ಪರಿಕರಗಳ ವಿತರಣೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಸಹಕಾರ ಸಂಘಗಳಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಮುನ್ನೆಚ್ಚರಿಕೆಯಾಗಿ ದಾಸ್ತಾನು ಮಾಡಿಕೊಳ್ಳಬೇಕು. ರೈತರಿಗೆ ವಿತರಿಸುವ ಬಿತ್ತನೆ ಬೀಜಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಮಾರುಕಟ್ಟೆಯಲ್ಲಿ ನಕಲಿ ಬೀಜ ಅಥವಾ ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟವಾಗದಂತೆ ತಡೆಯಲು ವಿಶೇಷ ಜಾಗೃತ ದಳ ರಚಿಸಿ ನಿರಂತರವಾಗಿ ದಾಳಿ ನಡೆಸಬೇಕು ಎಂದು ತಾಕೀತು ಮಾಡಿದರು. ಯಾವುದೇ ಖಾಸಗಿ ಮಾರಾಟಗಾರರು ನಿಗದಿತ ಬೆಲೆಗಿಂತ ಹೆಚ್ಚಿನ ದರ ವಸೂಲಿ ಮಾಡಿದರೆ ಅಂತಹ ಮಳಿಗೆಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದ ಅವರು, ರೈತರು ಖರೀದಿಸಿದ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು ಮತ್ತು ರೈತರಿಗೆ ಕಾಣುವಂತೆ ದಾಸ್ತಾನು ಫಲಕ ಪ್ರದರ್ಶಿಸಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಕ್ಷೇತ್ರ ಮಟ್ಟದಲ್ಲಿ ಸಂಚರಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬಿತ್ತನೆ ಸಮಯದಲ್ಲಿ ತಾಂತ್ರಿಕ ಸಲಹೆ ಮತ್ತು ಹವಾಮಾನ ಮುನ್ಸೂಚನೆ ಕುರಿತು ರೈತರಿಗೆ ಸಲಹೆ ಸೂಚನೆ ನೀಡಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.
ವಿತರಣಾ ಸಮಯದಲ್ಲಿ ಯಾವುದೇ ಗೊಂದಲ ಉಂಟಾಗದAತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಜಿಲ್ಲೆಯಲ್ಲಿ ಒಟ್ಟು 2.78 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದ್ದು, ಪ್ರಸ್ತುತ 1.33 ಟನ್ ರಸಗೊಬ್ಬರದ ಬೇಡಿಕೆಯಿದೆ. ಸದ್ಯಕ್ಕೆ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಬೇಡಿಕೆ ಇರಲಿದ್ದು, ಆ ಸಮಯಕ್ಕೆ ಪೂರೈಕೆ ಮಾಡಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಶ್ರೀಧರ್ ಶೆಟ್ಟಿ ಮಾತನಾಡಿ, ಕೊಟ್ಟೂರಿನಲ್ಲಿ ರೈಲ್ವೆ ರೇಕ್ ಪಾಯಿಂಟ್ ಸ್ಥಾಪಿಸುವಂತೆ ಒತ್ತಾಯಿಸಿದರು. ಪ್ರಸ್ತುತ ದಾವಣಗೆರೆ, ಕೊಪ್ಪಳ ಮತ್ತು ಬಳ್ಳಾರಿಯಿಂದ ರಸಗೊಬ್ಬರ ತರಿಸಿಕೊಳ್ಳುತ್ತಿದ್ದು, ಇದರಿಂದ ಸಾರಿಗೆ ವೆಚ್ಚ ಅಧಿಕವಾಗುತ್ತಿದೆ. ಈ ರೇಕ್ ಪಾಯಿಂಟ್ ಯೋಜನೆಗೆ ಈಗಾಗಲೇ 40 ಕೋಟಿ ರೂಪಾಯಿ ಮಂಜೂರಾಗಿದ್ದರೂ ಕೆಲಸ ಪ್ರಾರಂಭವಾಗಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಗುಲ್ಬರ್ಗಾ ವಿಚಕ್ಷಣಾ ವಿಭಾಗದ ಜಂಟಿ ನಿರ್ದೇಶಕ ಶಿವಕುಮಾರ್ ಸೇರಿದಂತೆ ಮತ್ತಿತರರು ಇದ್ದರು.


