ಕೊಪ್ಪಳ ಏಪ್ರಿಲ್ ೦೮, : ಏಪ್ರಿಲ್ ೨೦ ರಂದು ಆಚರಿಸಲಾಗುವ ಶ್ರೀ ಬಸವ ಜಯಂತಿ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲು, ಒಳ್ಳೆಯ ರೀತಿಯಲ್ಲಿ ಆಯೋಜನೆ ಮಾಡಲು ಎಲ್ಲರೂ ಸಹಕರಿಸಿ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಅವರು ಬುಧವಾರದಂದು ಶ್ರೀ ಬಸವ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದು ಬೆಳಗ್ಗೆ ೮ ಗಂಟೆಗೆ ಅಂಬಿಗರ ಚೌಡಯ್ಯ ಉದ್ಯಾನವನದಲ್ಲಿರುವ ಬಸವೇಶ್ವರ ಪುತ್ಥಳಿಗೆ ಹೂ-ಮಾಲೆಗಳನ್ನು ಹಾಕಿದ ನಂತರ ೯ ಗಂಟೆಗೆ ಗಂಜ್ ಸರ್ಕಲ್‌ನಲ್ಲಿರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ನಂತರ ಸಂಜೆ ೪ ಗಂಟೆಗೆ ಗಡಿಯಾರ ಕಂಬದ ಬಳಿ ಇರುವ ಮಹೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದರು.
ವೇದಿಕೆ ಕಾರ್ಯಕ್ರಮ ಅಂದು ಸಂಜೆ ೬ ಗಂಟೆಗೆ ಗವಿಮಠದ ತೇರು ಮೈದಾನದಲ್ಲಿ ನಡೆಯಲಿದೆ. ರಾಯಭಾಗ ತಾಲ್ಲೂಕಿನ ಹಾರೋಗೇರಿಯ ಶರಣ ಚಿಂತಕರು ಹಾಗೂ ಹಿರಿಯ ಸಾಹಿತಿಗಳಾದ ಡಾ.ವಿ.ಎಸ್.ಮಾಳಿ ಹಾಗೂ ಬೆಳಗಾವಿಯ ಶಿಕ್ಷಕಿ ಹಾಗೂ ಬಸವ ಚಿಂತಕರಾದ ಡಾ.ದಾನಮ್ಮ ಝಳಕಿ ಇವರು ಬಸವೇಶ್ವರ ಅವರ ಕುರಿತು ವಿಶೇಷ ಉಪನ್ಯಾಸ ನೀಡುವರು. ರಥದ ಸಿಂಗಾರ ಒಳ್ಳೆಯ ರೀತಿಯಲ್ಲಿ ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸೇರಿದಂತೆ ಇತರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಜವಾಬ್ದಾರಿಯಿಂದ ಹಾಗೂ ಅಚ್ಚುಕಟ್ಟಾಗಿ ನಿಭಾಯಿಸಬೇಕು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು.
ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ, ಆಹಾರ ಇಲಾಖೆಯ ಉಪನಿರ್ದೇಶಕರಾದ ವಿಶ್ವನಾಥಗೌಡ ಎಂ.ಎನ್., ಡಿಸಿಎಫ್ ಕಚೇರಿಯ ಮಲ್ಲಿಕಾರ್ಜುನ ಗೌಡರ್, ಎಎಸ್‌ಐ ವೀರಭದ್ರಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ., ಬಸವ ಸಮಾಜದ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ, ಈಶ್ವರಪ್ಪ ತೋಟಪ್ಪ ದಿನ್ನಿ, ಸೇರಿದಂತೆ ಸಮಾಜದ ಇತರೆ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಶ್ರೀ ಬಸವ ಜಯಂತಿ: ಪೂರ್ವಭಾವಿ ಸಭೆ -ಅದ್ಧೂರಿ ಹಾಗೂ ಅರ್ಥಪೂರ್ಣ ಜಯಂತಿಗೆ ಎಲ್ಲರೂ ಸಹಕರಿಸಿ: ಎಡಿಸಿ ಸಿದ್ರಾಮೇಶ್ವರ


