ಬಾಬು ಜಗಜೀವನ ರಾಂ ಅವರು ಸರಳ, ಸಜ್ಜನರಾಗಿ, ಸಮಾನತೆಗಾಗಿ ಹೋರಾಟ ಮಾಡಿದವರು: ಜನವಾಡ ಅಲ್ಲಮಪ್ರಭುಗಳ ಆಶ್ರಮದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು

MK HasiruKranti
ಬಾಬು ಜಗಜೀವನ ರಾಂ ಅವರು ಸರಳ, ಸಜ್ಜನರಾಗಿ, ಸಮಾನತೆಗಾಗಿ ಹೋರಾಟ ಮಾಡಿದವರು: ಜನವಾಡ ಅಲ್ಲಮಪ್ರಭುಗಳ ಆಶ್ರಮದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು
WhatsApp Group Join Now
Telegram Group Join Now
ಧಾರವಾಡ : ಮಹಾತ್ಮರ, ರಾಷ್ಟ್ರೀಯ ನಾಯಕರ ಜಯಂತಿ ದಿನದಂದು ನಾವು ಅವರಿಂದ ಏನು ಕಲಿಯುತ್ತೇವೆ, ಏನು ತಿಳಿಯುತ್ತೇವೆ, ಅದನ್ನು ಹೇಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂಬುದು ಅತಿ ಮುಖ್ಯವಾಗಿದೆ. ಡಾ. ಬಾಬು ಜಗಜೀವನ ರಾಂ ಅವರು ಸರಳ, ಸಜ್ಜನರಾಗಿ, ಸಮಾನತೆಗಾಗಿ ಹೋರಾಟ ಮಾಡಿದವರು. ನಾವು ಯಾರಿಗಿಂತ ಕಡಿಮೆ ಇಲ್ಲ. ನಮ್ಮಲ್ಲಿ ಅಗತ್ಯ ಶಕ್ತಿ, ಜ್ಞಾನವಿದ್ದರೆ ಯಾವುದೇ ಹಂತಕ್ಕಾದರೂ ಹೋಗಿ ತಲುಪಬಹುದು. ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಡಾ. ಬಾಬು ಜಗಜೀವನ ರಾಂ ಅವರು ಅಂದು ತೆಗೆದುಕೊಂಡ ನಿರ್ಧಾರಗಳು ಇವತ್ತಿಗೂ ಮಾದರಿ ಆಗಿವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಅಲ್ಲಮಪ್ರಭುಗಳ ಆಶ್ರಮದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಅವರು ಹೇಳಿದರು.
 ಧಾರವಾಡ ನಗರದ ಸನ್ಮತಿ ಮಾರ್ಗದ ಹತ್ತಿರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಜರುಗಿದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ 119 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಡಾ. ಬಾಬು ಜಗಜೀವನ ರಾಂ ಅವರು ಆದರ್ಶ ರಾಜಕಾರಣಿ ಅಷ್ಟೇ ಆಗಿರಲಿಲ್ಲ, ಅವರೊಬ್ಬ ರಾಷ್ಟ್ರಭಕ್ತ ರಾಜಕಾರಣಿ ಆಗಿದ್ದರು. ಸದಾ ಕಾಲ ಅವರು ದೇಶದ ಅಭಿವೃದ್ಧಿಪರ ನಿರ್ಧಾರ ಕೈಗೊಳ್ಳುತ್ತಿದ್ದರು ಎಂದು ಅವರು ಹೇಳಿದರು.
ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ಎಲ್ಲ ಸರ್ವ ಧರ್ಮದವರು ಒಂದು ಎಂದು ಬದುಕುತ್ತಿರುವ ದೇಶ ಭಾರತ. ಈ ದೇಶದಲ್ಲಿ ಎಲ್ಲರೂ ಒಕ್ಕಟ್ಟಾಗಿ ಬದುಕುವುದಕ್ಕೆ ಒಂದು ದಾರಿ ದೀಪ ಹಾಕಿಕೊಟ್ಟವರು ಅಂಬೇಡ್ಕರ್ ಅವರು ಎಂದು ಅವರು ತಿಳಿಸಿದರು.
ಶಿಕ್ಷಣ ಮತ್ತು ಹೋರಾಟವು ಜೀವನದಲ್ಲಿ ಮುಖ್ಯವಾದ ಅಂಶಗಳು, ಆದರೆ ಅವು ಸಂಸ್ಕಾರ, ಮಮತೆ, ಸೌಜನ್ಯ, ಮಾನವೀಯತೆ ಮತ್ತು ನ್ಯಾಯದೊಂದಿಗೆ ಇರಬೇಕು. ಹೋರಾಟವು  ಸಂಸ್ಕಾರದಿಂದ, ಸೌಜನ್ಯದಿಂದ ಕೂಡಿದ್ದರೆ, ಅದು ಜೀವನವನ್ನು ಶ್ರೇಷ್ಠಗೊಳಿಸುತ್ತದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಡಾ. ಬಾಬು ಜಗಜೀವನ್ ರಾಂ ಅವರು ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿ ಸಮಾನತೆಗಾಗಿ ಮಹತ್ವದ ಕೆಲಸ ಮಾಡಿದವರು. ಅವರ ಸಾಧನೆಗಳನ್ನು ಸದಾ ಸ್ಮರಿಸಿಕೊಳ್ಳಬೇಕು ಮತ್ತು ಅವರು ತೋರಿಸಿದ ದಾರಿ ಯುವಕರಿಗೆ ಉತ್ತಮ ಮಾರ್ಗದರ್ಶನವಾಗಿದೆ ಎಂದು ಅವರು ಹೇಳಿದರು.
ವಿಶೇಷವಾಗಿ, ನ್ಯಾಯ ಮತ್ತು ಸಮಾನತೆ ಸ್ಥಾಪನೆಗೆ ಅವರು ಪ್ರಮುಖ ಪಾತ್ರವಹಿಸಿದ್ದರು. ಯುವಕರು ಅವರ ಆದರ್ಶಗಳನ್ನು ಅನುಸರಿಸಿ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂದು ಹೇಳುವಂತೆ, ಡಾ. ಬಾಬು ಜಗಜೀವನ ರಾಂ ಅವರ ಬಾಲ್ಯದ ಜೀವನವನ್ನು ನೋಡಿದಾಗ ಅವರ ಸಮರ್ಥತೆ, ಸಮಾನತೆ ಚಿಂತನೆ ಮತ್ತು ಪ್ರತಿಭಟನೆ ಸ್ಪಷ್ಟವಾಗಿ ಕಾಣುತ್ತದೆ. ಬಾಲ್ಯದಿಂದಲೇ ಅವರಲ್ಲಿ ನಾಯಕತ್ವದ ಗುಣಗಳು ಬೆಳೆದಿದ್ದವು. ಈ ಕಾರಣದಿಂದ ಅವರು ಭಾರತದ ರಾಜಕಾರಣದಲ್ಲಿ ಧೀರ್ಘ ಕಾಲ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ತುಮಕೂರು ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ವಕೀಲ ರಂಗಧಮಯ್ಯ ಜೆ.ಸಿ. ಜನಕಲೋಟಿ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ಹಾಗೂ ಸ್ನಾತಕೊತ್ತರ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದಲ್ಲಿ ವಿಶೇಷ ಸೇವೆ ಸಲ್ಲಿಸಿದ ಮುಖಂಡರುಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
*ಸಾರ್ವಜನಿಕರ ಆರೋಗ್ಯ ತಪಾಸಣೆ:* ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಆನಂದ ನಗರ ಕಲ್ಪವೃಕ್ಷ ವುಮೆನ್ ಮತ್ತು ರೂರಲ್ ಡೆವಲಪ್ಟೆಂಟ್ ಸೊಸೈಟಿ ನೆರವು ಸಂಸ್ಥೆ ಸಂಯುಕ್ತ ಆಶ್ರಯರಲ್ಲಿ ಅನೀಮಿಯಾ ತಡೆಗಟ್ಟುವ ಕುರಿತು ಸಾರ್ವಜನಿಕರ ಆರೋಗ್ಯ ತಪಾಸಣೆ ಶಿಬಿರವನ್ನು  ನಡೆಸಿದರು.
 ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಸಮಾಜದ ವಿವಿಧ ಮುಖಂಡರು, ಜಿಲ್ಲಾ ಹಾಗೂ ಉಪ ವಿಭಾಗ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ಜಿಲ್ಲಾ ಮಟ್ಟದ ಹಾಗೂ ಉಪ ವಿಭಾಗ ಮಟ್ಟದ ಸಪಾಯಿ ಕರ್ಮಚಾರಿ ಜಾಗೃತಿ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ ಹೆಬ್ಬಳ್ಳಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಡಿಸಿ ಗೀತಾ ಸಿ. ಡಿ ಅವರು ಸಂವಿಧಾನದ  ಪೀಠಿಕೆಯನ್ನು ಸಭಿಕರಿಗೆ ಭೋದಿಸಿದರು.
ಎಂ.ಬಿ. ಸನ್ನೇರಿ ವಂದಿಸಿದರು. ಹಾಗೂ ಪ್ರವೀಣ ಮಸಕಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯದ  ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
*ಭವ್ಯ ಮೆರವಣಿಗೆ:* ಡಾ.ಬಾಬು ಜಗಜೀವನ ರಾಂ ಅವರ 119 ನೇ ಜಯಂತಿ ನಿಮಿತ್ತ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಡಾ.ಬಾಬು ಜಗಜೀವನ ರಾಂ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.
 ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹಾಗೂ ಸಮಾಜ ಮುಖಂಡರು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಕಲಾತಂಡಗಳೊಂದಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಭಾವಚಿತ್ರದ ಮೆರವಣಿಗೆ ಸಂಚರಿಸಿ, ಧಾರವಾಡ ನಗರದ ಸನ್ಮತಿ ಮಾರ್ಗದ ಹತ್ತಿರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಭವನಕ್ಕೆ ಮುಕ್ತಾಯವಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
WhatsApp Group Join Now
Telegram Group Join Now
Share This Article