ಸೋಮೈಯಾ ಶಾಲೆಯಲ್ಲಿ ೩೫ ವರ್ಷಗಳ ನಂತರ ನೆನಪಿನ ಬುತ್ತಿ ಬಿಚ್ಚಿದ ಶಿಷ್ಯರು !
ಗುರುವಂದನ, ಸಹಪಾಠಿಗಳ ಸಮ್ಮಿಲನ ! ಶಿಷ್ಯರು ಪುಳಕ, ಶಿಕ್ಷಕರು ಭಾವುಕ !
ಮಹಾಲಿಂಗಪುರ: ಬಾಲ್ಯದ ವಯಸು ಬಲು ಸೊಗಸು, ವಿದ್ಯಾರ್ಥಿ ಜೀವನ ಬಂಗಾರದಂತೆ ಪಾವನ, ಕಲಿಕೆಯ ಕಾಲವೇ ಕಲರವ, ಸವಿಸವಿ ನೆನಪುಗಳೇ ಕಚಗುಳಿ, ಮರೆಯದ ಮಾಣಿಕ್ಯದಂಥ ಆ ಹೊತ್ತನ್ನು ಮೆಲುಕು ಹಾಕುವ ಸಲುವಾಗಿ, ಅಕ್ಷರ ಜ್ಞಾನದ ತುತ್ತು ಉಣಬಡಿಸಿದ ಗುರುಗಳ ಋಣ ಸಂದಾಯಕ್ಕೆ ನೆನಪಿನ ಬುತ್ತಿ ಬಿಚ್ಚುವ ಮೂಲಕ ಹಳೇ ವಿದ್ಯಾರ್ಥಿಗಳು ೩೫ ವರ್ಷಗಳ ನಂತರ ಮತ್ತೆ ಒಂದಾಗಿ ಸವಿಸವಿ ನೆನಪಿನ ಸ್ನೇಹ ಸಮ್ಮಿಲನ ಮತ್ತು ಗುರುವಂದನ ಕಾರ್ಯಕ್ರಮ ಹಮ್ಮಿಕೊಂಡು ಇಡೀ ದಿನ ಮತ್ತೆ ಮಕ್ಕಳಾದರು.
ಸಮೀಪದ ಸಮೀರವಾಡಿಯ ಸೋಮೈಯಾ ಶಿಶುನಿಕೇತನ ಪ್ರಾಥಮಿಕ ಶಾಲೆ ಹಾಗೂ ಸೋಮೈಯಾ ವಿನಯ ಮಂದಿರ ಪ್ರೌಢಶಾಲೆಯಲ್ಲಿ ೧೯೮೦ರಲ್ಲಿ ೧೯೯೧ರ ಅವಧಿಯಲ್ಲಿ ೧ರಿಂದ ೧೦ನೇ ತರಗತಿ ಕಲಿತ ಹಳೆ ವಿದ್ಯಾರ್ಥಿಗಳು ಇತ್ತೀಚೆಗೆ ಸ್ನೇಹ ಸಮ್ಮಿಲನದೊಂದಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡರು. ರಾಜ್ಯ-ಹೊರರಾಜ್ಯಗಳಲ್ಲಿ ನೆಲೆಸಿದ ಹಳೇ ವಿದ್ಯಾರ್ಥಿಗಳು ಮತ್ತೆ ಒಂದಾಗಿ ಸಡಗರದಿಂದ ಸಂಭ್ರಮಿಸಿದರು.
ಗೋದಾವರಿ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್.ಭಕ್ಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಲಿತ ಮೇಲೆ ಶಾಲೆಯನ್ನು ಮತ್ತು ಬಲಿತ ಮೇಲೆ ಬಾಲ್ಯವನ್ನು ಮರೆಯಬಾರದು. ಎಲ್ಲ ಒತ್ತಡಗಳ ಮಧ್ಯೆ ಸಂಬಂಧಗಳು ಹಳಸದಂತೆ ಪ್ರೀತಿಯಿಂದ ಬೆಳೆಸಬೇಕು ಎಂದರು. ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ವಿಜಯಕುಮಾರ ಕಣವಿ ಮಾತನಾಡಿ ಬಾಳ ಸವಾರಿಗೆ ಶಿಕ್ಷಣವೇ ಇಂಧನ ಮತ್ತು ಅದುವೇ ಧನವಾಗಿದ್ದರಿಂದ ಉಳಿದೆಲ್ಲಕ್ಕಿಂತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು. ನಿವೃತ್ತ ಪ್ರಧಾನ ಗುರು ಎಚ್.ಎಸ್.ಕಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾರಣಗೌಡ ಉತ್ತಂಗಿ ನಿರೂಪಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಭಾಗವಹಿಸಿದ್ದರು.
ಸಾಮೂಹಿಕವಾಗಿ ಕಲಿತು, ಬಲಿತು ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಉತ್ತುಂಗದಲ್ಲಿದ್ದರೂ ಯಾವುದೇ ಹಮ್ಮು-ಬಿಮ್ಮು, ಗತ್ತು-ಗೈರತ್ತು ಇಲ್ಲದೇ ಗುರುಗಳ ಮುಂದೆ ಗೌಣವಾಗಿ ಮಾಸ್ಟರ್ ಮುಂದೆ ಮೌನವಾಗಿ, ಗುರುಗಳ ಮುಂದೆ ಮತ್ತೆ ಮಕ್ಕಳಾದರು. ಗುರುವೃಂದಕ್ಕೆ ಪುಷ್ಪವೃಷ್ಠಿ ಮಾಡಿ ಗೌರವಿಸಿದರು. ಗುರುಗಳ ಪದತಲದಲ್ಲಿ ಕುಳಿತು ಭಾವಚಿತ್ರ ತೆಗೆಸಿಕೊಂಡರು. ಅಂದು ಆಟೋಟಗಳೊಂದಿಗೆ ಕಲಿತವರು ತಮಗಿಂತ ಎತ್ತರ ಬೆಳೆದು ಇಂದು ಕಣ್ಮುಂದೆ ಬಂದಾಗ ಗುರುಗಳು ಭಾವುಕರಾದರು. ಸಾಧನೆ ಮಾಡಿದ ಕೆಲ ಶಿಷ್ಯರನ್ನು ಗುರುಗಳೇ ಸನ್ಮಾನ ಮಾಡಿದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಗುರುಗಳೊಂದಿಗೆ ಸಾಮೂಹಿಕ ಭಾವಚಿತ್ರ ತೆಗೆಸಿಕೊಂಡರು. ನಂತರ ಎಲ್ಲ ಗುರುವರ್ಯರನ್ನು ವೇದಿಕೆವರೆಗೆ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಿದರು. ಪುಷ್ಪವೃಷ್ಠಿ ಮಾಡುವ ಮೂಲಕ ಕೈಮುಗಿದು ಸ್ವಾಗತ ಕೋರಿದರು. ಅಗಲಿದ ಗುರುಗಳು ಮತ್ತು ಸಹಪಾಠಿಗಳಿಗೆ ಮೌನ ಶ್ರದ್ದಾಂಜಲಿ ಸಲ್ಲಿಸಿ ಕಾರ್ಯಕ್ರಮ ಆರಂಭಿಸಿದರು. ನಂತರ ಹಳೆ ವಿದ್ಯಾರ್ಥಿಗಳು ತಮ್ಮ ಪ್ರಸ್ತುತ ಜೀವನದ ಜಂಜಡಗಳನ್ನು ಮರೆತು ಇಡೀ ದಿನ ಮಕ್ಕಳಂತೆ ಮೈಮರೆತು ಸಹಪಾಠಿಗಳೊಂದಿಗೆ ಹಾಗೂ ಗುರುಗಳೊಂದಿಗೆ ಬೆರೆತು ನೆನಪುಗಳನ್ನು ಮೆಲಕು ಹಾಕಿದರು. ಕಲಿಕೆಯ ಅವಧಿಯಲ್ಲಿನ ತಮ್ಮ ದೌರ್ಬಲ್ಯ-ಪ್ರಾಬಲ್ಯ, ತಪ್ಪು-ಒಪ್ಪು, ಕೀಟಲೆ-ದಾಂಧಲೆ, ಮೋಜು-ಮಸ್ತಿ, ಅನುಭವ-ಅವಾಂತರಗಳ ಬಗ್ಗೆ ಗುರು-ಶಿಷ್ಯರು ಮೆಲುಕು ಹಾಕಿದರು. ಗುರು ಶಿಷ್ಯರು ಸಾಮೂಹಿಕವಾಗಿ ಜವಾರಿ ಭೋಜನ ಸವಿದರು.
ಬಾಕ್ಸ್:
ಕಲಿತ ಮೇಲೆ ಶಾಲೆಯ ಹಂಗ್ಯಾಕೆ? ಬಲಿತ ಮೇಲೆ ಗುರುವಿನ ಗುಂಗ್ಯಾಕೆ? ಎಂಬ ನಿಂದನೆಗಳೇ ತುಂಬಿರುವ ಇಂದಿನ ದಿನಗಳಲ್ಲಿ ಗುರುವಂದನೆ ಮಾಡಿ ಗುರುಭಕ್ತಿ ಮೆರೆದ, ಸಮಯವೇ ಇಲ್ಲದಷ್ಟು ಬ್ಯುಜಿಯಾಗಿರುವ ಸಂದಿಗ್ಧತೆಯಲ್ಲಿ ಸಹಪಾಠಿಗಳ ಸಮ್ಮಿಲನ ಮಾಡಿ ಸೌಜನ್ಯ ತೋರಿದ ಹಾಗೂ ಅಂದಿನ ಸಾವಿರದ ಸವಿನೆನಪುಗಳನ್ನು ಮೆಲುಕು ಹಾಕಿ ಪುಳಕಿತರಾದ ಶಿಷ್ಯರ ಭಕ್ತಿ ಕಂಡ ಗುರುಗಳು ಭಾವುಕರಾದರು.
೬ ಎಂಎಲ್ಪಿ ೨
ಮಹಾಲಿಂಗಪುರ ಸಮೀಪದ ಸಮೀರವಾಡಿಯ ಸೋಮೈಯಾ ಶಿಶುನಿಕೇತನ ಪ್ರಾಥಮಿಕ ಶಾಲೆ ಹಾಗೂ ಸೋಮೈಯಾ ವಿನಯ ಮಂದಿರ ಪ್ರೌಢಶಾಲೆಯಲ್ಲಿ ೧೯೮೦ರಲ್ಲಿ ೧೯೯೧ರ ಅವಧಿಯಲ್ಲಿ ೧ರಿಂದ ೧೦ನೇ ತರಗತಿ ಕಲಿತ ಹಳೆ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನದೊಂದಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡರು.


