ಬೆಂಗಳೂರು, ಏಪ್ರಿಲ್ 15: ನಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದೆ. ಮುಂದಿನ ಐದು ವರ್ಷ ಏನು ಮಾಡುತ್ತೇವೆ ಅನ್ನುವುದನ್ನು ಹೇಳಿದ್ದೇವೆ. ಕೇವಲ ಐದು ವರ್ಷ ಮಾತ್ರವಲ್ಲ, ಭವಿಷ್ಯದ ದೃಷ್ಟಿಯಿಂದಲೂ ನಿಮ್ಮ ಸಹಕಾರ ಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.
ಬೆಂಗಳೂರಿನ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತ್ತೊಮ್ಮೆ ಮೋದಿ ಸಲುವಾಗಿ ನಾನು ಬೆಂಗಳೂರಿಗೆ ಬಂದಿದ್ದೇನೆ ಎಂದರು.
ನಮ್ಮ ಹತ್ತು ವರ್ಷದ ಸಾಧನೆಯನ್ನು ಜನರ ಮುಂದೆ ಇಟ್ಟಿದ್ದೇವೆ. 25 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿದ್ದೇವೆ. ಪ್ರತಿದಿನ ದೇಶದಲ್ಲಿ ರಸ್ತೆ, ರೈಲ್ವೇ ಟ್ಯ್ರಾಕ್ ನಿರ್ಮಾಣವಾಗುತ್ತಿವೆ. ಜಿ20 ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಆಪರೇಷನ್ ಗಂಗಾ ಸೇರಿದಂತೆ ಹಲವು ಹೆಸರುಗಳಲ್ಲಿ ಕಾರ್ಯಾಚರಣೆ ನಡೆಸಿ ತಾಯ್ನಾಡಿಗೆ ಕರೆ ತಂದಿದ್ದೇವೆ ಎಂದು ತಿಳಿಸಿದರು.
ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಮುಂದಿನ ವರ್ಷಗಳಲ್ಲಿ ನಾವು ನಡೆದುಕೊಳ್ಳುತ್ತೇವೆ. ವರ್ಷಕ್ಕೆ ಸರಾಸರಿ ಎಂಟು ವಿಮಾನ ನಿಲ್ದಾಣಗಳ ನಿರ್ಮಾಣ ಮಾಡುತ್ತೇವೆ. ಮೂಲಭೂತ ಸೌಕರ್ಯಗಳ ವೃದ್ಧಿ, ಭಯೋತ್ಪಾದನೆ ಚಟುವಟಿಕೆಗಳ ನಿಗ್ರಹಕ್ಕೆ ಕಠಿಣ ಕ್ರಮ ವಹಿಸಲಾಗಿದೆ. ಪಿಎಂ ಗರೀಬ್ ಕಲ್ಯಾಣ್ ಯೋಜನೆ ಮುಂದಿನ ಐದು ವರ್ಷವೂ ಮುಂದುವರೆಯಲಿದೆ.
ಆವಾಸ್ ಯೋಜನೆ ಅಡಿಯಲ್ಲಿ ಮುಂದಿನ ಐದು ವರ್ಷ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಹಿರಿಯರಿಗೆ ಆಯುಷ್ಮಾನ್ ಭಾರತ್ ವಿಸ್ತರಿಸಲಾಗುವುದು. ವಿಪುಲ ಉದ್ಯೋಗವಕಾಶ, ಮುದ್ರಾ ಯೋಜನೆಯನ್ನು ಸ್ಟಾರ್ಟಪ್ಗಳಿಗೂ ವಿಸ್ತರಣೆ ಹೀಗೆ ಹಲವು ಭರವಸೆಗಳನ್ನು ಕೊಡಲಾಗಿದೆ ಎಂದು ತಿಳಿಸಿದರು.