ಬಳ್ಳಾರಿ ಏ. 08.: ರಾಜ್ಯ ಸರ್ಕಾರ ನೇಮಕ ಮಾಡಲು ಉದ್ದೇಶಿಸಿರುವ 56432 ಹುದ್ದೆಗಳನ್ನು ಕಡ್ಡಾಯವಾಗಿ ಒಳ ಮೀಸಲಾತಿ ಅಡಿಯಲ್ಲಿ ರೋಸ್ಟರ್ ಪದ್ಧತಿಯನ್ನು ಸರಿಪಡಿಸಿ ನೇಮಕಾತಿಯನ್ನು ನಡೆಸಬೇಕೆಂದು ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಆಗ್ರಹಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ಎಚ್ಎಸ್ ನಾಗಮೋಹನ್ ದಾಸ್ ಆಯೋಗವು ಶಿಫಾರಸ್ಸು ಮಾಡಿದ ಪ್ರಕಾರ ಪರಿಶಿಷ್ಟ ಜಾತಿ ಅಲೆಮಾರಿ ಅರೆ ಅಲೆಮಾರಿ ಜಾತಿಗಳಿಗೆ ಪರಿಶಿಷ್ಟ ಜಾತಿಯ ಶೇಕಡಾ 17ರ ಪೈಕಿ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಒಂದು ಮೀಸಲಾತಿ ಕಲ್ಪಿಸಿ ನೂತನ ಆದೇಶವನ್ನು ಹೊರಡಿಸಬೇಕು ಈ ಒಳ ಮೀಸಲಾತಿಯ ಕುರಿತು ಯಾವುದೇ ಅವಸರ ಮತ್ತು ಅವಘಡಕ್ಕೆ ಎಡೆ ಮಾಡಿಕೊಡದೆ ಉಪಚುನಾವಣೆ ಮುಗಿದ ನಂತರ ಒಳ ಮೀಸಲಾತಿ ಮತ್ತು ರೋಸ್ಟರ್ ಪದ್ಧತಿಯನ್ನು ಸರಿಪಡಿಸಿ ನೇಮಕಾತಿಯನ್ನು ನಡೆಸಿ ಪರಿಶಿಷ್ಟ ಜಾತಿಯ ಎಲ್ಲಾ ಒಳಪಂಗಡಿಗಳಿಗೂ ಅನುಕೂಲ ಮಾಡಿಕೊಡಬೇಕೆಂದರು.
ಡಾಕ್ಟರ್ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ನ್ಯಾಯದೊಂದಿಗೆ ನಿರುದ್ಯೋಗ ನಿವಾರಿಸಿ ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟುಕೊಂಡು ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಿ ಕೊಡಬೇಕು, ಆದರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಶೇಕಡ 5ರಷ್ಟು ಪರಿಶಿಷ್ಟ ಪಂಗಡಕ್ಕೆ ಶೇಕಡಾ 4ರಷ್ಟು ಮೀಸಲಾತಿಯನ್ನು ಹೆಚ್ಚಿಸಿ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡಿದರು, ಈ ಹೆಚ್ಚಾದ ಮೀಸಲಾತಿಯು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಶೇಕಡ 50 ಅನ್ನು ಮೀರಿ ಹೋಗಿರುತ್ತದೆ ಆದರೂ ಸಹ ಈ ಮೀಸಲಾತಿಯನ್ನು ಸಂವಿಧಾನದ ಶೆಡ್ಯೂಲ್ 9ರ ಅಡಿಯಲ್ಲಿ ತಂದಿದ್ದರೆ ಮೀಸಲಾತಿಯನ್ನು ಜಾರಿಗೊಳಿಸಬಹುದಿತ್ತು , ಆದರೆ ಬಿಜೆಪಿ ಸರ್ಕಾರ ಆ ಕೆಲಸ ಮಾಡದೆ ಪರಿಶಿಷ್ಟರ ಮೂಗಿಗೆ ತುಪ್ಪ ಸವರಿ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
ಈಗಲೂ ಕಾಲ ಮಿಂಚಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವ ಪಕ್ಷದ ಸಂಸದರ ನಿಯೋಗದೊಂದಿಗೆ ಪ್ರಧಾನಿಯನ್ನು ಭೇಟಿ ಮಾಡಿ ಶೆಡ್ಯೂಲ್ 9ರಲ್ಲಿ ಸೇರಿಸಲು ಒತ್ತಾಯಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನ್ಯಾಯ ದೊರೆಕಿಸಿ ಕೊಡಬೇಕೆಂದು ಆಗ್ರಹಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ ಕಲಿ ವೀರ ಹನುಮಂತಪ್ಪ ಕಾಕರಗಲ್ ಬಳ್ಳಾರಿ ಜಿಲ್ಲಾ ಸಂಚಾಲಕರಾದ ಗೋವರ್ಧನ್ ಇದ್ದರು.


