ಮೂಡಲಗಿ : ಹಳೆಯ ಕಾಲದ ಹಿರಿಯರು, ಜನ ಹಾಗೂ ಜಾನುವಾರುಗಳಿಗೆ ರೋಗ, ರುಜೀಣುಗಳು ಬರದ ಹಾಗೇ ಗ್ರಾಮದ ತುಂಬೆಲ್ಲ ಭಂಡಾರ ರೂಪದ ಶುದ್ಧ ಅರಿಷಿಣ ಪುಡಿಯನ್ನು ಎರಚಿ ಜಾತ್ರೆಯನ್ನು ಮಾಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಸೋಮವಾರ ತಾಲ್ಲೂಕಿನ ನಾಗನೂರು ಪಟ್ಟಣದಲ್ಲಿ ಜರುಗಿದ. ಅರಣ್ಯ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಾತ್ರೆಗಳು ನಮ್ಮ ದೇಶೀಯ ವೈಭವವನ್ನು ಭಿತ್ತರಿಸುತ್ತಿವೆ ಎಂದರು. ಹಿಂದಿನ ಕಾಲದಲ್ಲಿ ಪ್ಲೇಗ್, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದವು. ಜಾನುವಾರುಗಳಿಗೆ ಕಾಲುಬೇನೆ, ಬಾಯಿ ಬೇನೆ ಬರುತ್ತಿದ್ದವು. ಇವುಗಳನ್ನು ಹೋಗಲಾಡಿಸಲು ಜನರು ದೇವರಿಗೆ ಮೊರೆ ಹೋಗುತ್ತಿದ್ದರು. ಎಲ್ಲಾ ಜಾತಿಯ ಜನರು ಒಟ್ಟಾಗಿ ಸೇರಿಕೊಂಡು ಗ್ರಾಮ ದೇವತೆಯರ ಜಾತ್ರೆಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ದೇವರಿಗೆ ನೈವೇದ್ಯ ಅರ್ಪಿಸಿ ಕೃಪೆಗೆ ಪಾತ್ರರಾಗುತ್ತಿದ್ದರು. ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ಈಗಿನ ಪೀಳಿಗೆಯವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನಮ್ಮ ದೇಶದ ಆಚಾರ, ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಜಾತ್ರಾ ಕಮಿಟಿಯ ಸದಸ್ಯರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಮುಖಂಡರಾದ ಚಂದ್ರು ಬೆಳಗಲಿ, ಸುಭಾಸ ಬೆಳಗಲಿ (ಪಡದಲ್ಲಿ), ಗಣಪತಿ ದೇಸಾರ, ರಮೇಶ ಬೆಟಗೇರಿ, ನಾಗಪ್ಪ ಬೆಳಕೂಡ, ಹಣಮಂತ ಕಿತ್ತೂರ, ಸಿದ್ದಪ್ಪ ಯಡ್ರಾವಿ, ಸಿದ್ದಪ್ಪ ಗುಡೆನ್ನವರ, ಸಿದ್ದಲಿಂಗ ವಾಳಕಿ, ಸದಾಶಿವ ಯಡ್ರಾವಿ, ಕೆಂಚಪ್ಪ ಗೊರೋಜಿ, ಸಿದ್ದಪ್ಪ ಗೊರೋಜಿ, ಯಲ್ಲಪ್ಪ ಪೂಜೇರಿ, ಸಿದ್ದಪ್ಪ ಯಡ್ರಾವಿ, ಶ್ರೀಶೈಲ ಕಿತ್ತೂರ ಮತ್ತಿತರರು ಉಪಸ್ಥಿತರಿದ್ದರು.


