ಮುದ್ದೇಬಿಹಾಳದಲ್ಲಿ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ.

Pratibha Boi
ಮುದ್ದೇಬಿಹಾಳದಲ್ಲಿ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ.
WhatsApp Group Join Now
Telegram Group Join Now
​ಮುದ್ದೇಬಿಹಾಳ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ತಾಲ್ಲೂಕು ಆಡಳಿತದ ವತಿಯಿಂದ ಏಪ್ರಿಲ್ 14 ರಂದು ಅತ್ಯಂತ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
​ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ತಹಶೀಲ್ದಾರ್ ಕೀರ್ತಿ ಚಾಲಕ ಅವರು ಮಾತನಾಡಿದರು. ತಾಲ್ಲೂಕಿನ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯತಿಗಳು, ಶಾಲಾ-ಕಾಲೇಜು ಹಾಗೂ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಜಯಂತಿಯನ್ನು ಆಚರಿಸಬೇಕು. ಈ ಕುರಿತು ಆಯಾ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿ ಸಮಾಜ ಕಲ್ಯಾಣ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
​ವಿಜೃಂಭಣೆಯ ಮೆರವಣಿಗೆ:
ಜಯಂತೋತ್ಸವದ ಅಂಗವಾಗಿ ಬೆಳಿಗ್ಗೆ 7:00 ಗಂಟೆಗೆ ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ನೆರವೇರಲಿದೆ. ಬೆಳಿಗ್ಗೆ 9:00 ರಿಂದ ಸಾಯಂಕಾಲ 6:00 ಗಂಟೆಯವರೆಗೆ ಸಾರ್ವಜನಿಕರಿಗೆ ಪುರಸಭೆ ಎದುರಿಗೆ ‘ಪ್ರೀತಿಯ ಭೋಜನ’ದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3:00 ಗಂಟೆಗೆ ನೇತಾಜಿ ನಗರದಿಂದ ಹೊರಡುವ ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆಯು ದ್ಯಾಮವ್ವನ ಗುಡಿ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಅಂಬೇಡ್ಕರ್ ಸರ್ಕಲ್‌ವರೆಗೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ಡೊಳ್ಳು, ಕೊಂಬು ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ. ಪುರಸಭೆ ವತಿಯಿಂದ ಪ್ರಮುಖ ವೃತ್ತಗಳಲ್ಲಿ ಸ್ವಚ್ಛತೆ ಹಾಗೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.
​ಉಚಿತ ಆರೋಗ್ಯ ಶಿಬಿರ:
ಸಾಮಾಜಿಕ ಕಳಕಳಿಯೊಂದಿಗೆ ಅನುಗ್ರಹ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಣ್ಣಿನ ಚಿಕಿತ್ಸೆ, ಹೃದಯದ ತಪಾಸಣೆ, ರಕ್ತ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ನಡೆಯಲಿದೆ. ರಾತ್ರಿ 8:00 ಗಂಟೆಗೆ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಮುಖಂಡ ಸಿ.ಜಿ. ವಿಜಯಕರ ಮಾಹಿತಿ ನೀಡಿದರು.
​ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸಂತಿ ಮಠ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಿದ್ದು, ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು. ದಲಿತ್ ಮುಖಂಡ ವಾಯ್.ಎಚ್. ವಿಜಯಕರ್ ಮಾತನಾಡಿ, ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿಯನ್ನು ಜಾತಿ-ಧರ್ಮದ ಭೇದವಿಲ್ಲದೆ ಸರ್ವರೂ ಸೇರಿ ಸಂಭ್ರಮದಿಂದ ಆಚರಿಸೋಣ ಎಂದರು. ಮುಖಂಡರಾದ ಹರೀಶ್ ನಾಟಿಕಾರ, ಪ್ರಶಾಂತ್ ಕಾಳೆ ಅವರು ಮಾತನಾಡಿ, ಮೆರವಣಿಗೆಯಲ್ಲಿ ಯಾವುದೇ ಲೋಪವಾಗದಂತೆ ಇಲಾಖೆಗಳು ಸ್ಪಂದಿಸಬೇಕು ಮತ್ತು ಪಟ್ಟಣದ ಅಲಂಕಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕೋರಿ, ಪಿಎಸ್ಐ ಸಂಜಯ್ ತಿಪ್ಪಾರಡ್ಡಿ, ಕ್ರೈಂ ಪಿಎಸ್ಐ ಆರ್.ಎಸ್. ಬಂಗಿ, ಹೆಸ್ಕಾಂ ಅಧಿಕಾರಿ ಆರ್.ಎಂ. ಹಾದಿಮನಿ, ದಲಿತ ಮುಖಂಡರಾದ ಶ್ರೀಕಾಂತ್ ಚಲವಾದಿ, ರೇವಣ್ಣಪ್ಪ ಅಜಮನಿ, ಶಿವಪುತ್ರ ಅಜಮನಿ, ಬಲಭೀಮ ನಾಯಕಮಕ್ಕಳು, ಭಗವಂತನ ಕಾಬಾಡೆ, ಅಶೋಕ ಪಾದಗಟ್ಟಿ, ನಾಗೇಶ ಭಂಜತ್ರಿ, ಶಿವು ಶಿವಪುರ, ತಿಪ್ಪಣ್ಣ ದೊಡ್ಡಮನಿ, ಬಾಲಚಂದ್ರ ಹುಲ್ಲೂರ, ಮಂಜುನಾಥಸ್ವಾಮಿ ಕುಂದರಗಿ, ಪ್ರಕಾಶ್ ಚಲವಾದಿ, ದೇವರಾಜ್ ಹಂಗರಗಿ, ಶರಣು ಚಲವಾದಿ, ಸಂಗು ಚಲವಾದಿ, ಪ್ರಚಂಡ ಚಲವಾದಿ, ಈರಣ್ಣ ತಾರನಾಳ, ಮುತ್ತು ಚಲವಾದಿ, ಸಿದ್ದಪ್ಪ ಚಲವಾದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article