ಕೊಪ್ಪಳ,07 : ಆರೋಗ್ಯವೇ ಅತ್ಯಂತ ದೊಡ್ಡ ಸಂಪತ್ತು ಈ ನುಡಿಯ ಮಹತ್ವವನ್ನು ನೆನಪಿಸುವ ದಿನವೇ ವಿಶ್ವ ಆರೋಗ್ಯ ದಿನ. ಪ್ರತಿ ವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಓ)ತನ್ನ ಸಂಸ್ಥಾಪನ ದಿನದ ಅಂಗವಾಗಿ ಜಾಗತಿಕ ಮಟ್ಟದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತು ಎಲ್ಲರೂ ಉತ್ತಮ ಆರೋಗ್ಯವನ್ನು ಹೊಂದಲಿ ಎಂಬ ಸಂದೇಶವನ್ನು ಕೊಡುವ ಉದ್ದೇಶದಿಂದ ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತದೆ ಎಂದು ಕೊಪ್ಪಳದ ಶ್ರೀ ಅನ್ನಪೂರ್ಣೇಶ್ವರಿ ಆಸ್ಪತ್ರೆಯ ವೈದ್ಯರಾದ ಡಾ. ಕಸ್ತೂರಿ ಕರಮುಡಿ ಅಭಿಪ್ರಾಯ ಪಟ್ಟರು,
ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ತಮ್ಮ ವಿಶೇಷ ಲೇಖನದಲ್ಲಿ ಈ ಕುರಿತು ಲಿಖಿತ ಹೇಳಿಕೆ ನೀಡಿದ ಅವರು
ಈ ವರ್ಷದ 2026 ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯ ವಾಕ್ಯ “ಆರೋಗ್ಯಕ್ಕಾಗಿ ಒಟ್ಟಾಗಿ ವಿಜ್ಞಾನದೊಂದಿಗೆ ನಿಲ್ಲು” ಹೌದು ವಿಶ್ವದ ಪ್ರತಿಯೊಬ್ಬರ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ಮತ್ತು ಆರೋಗ್ಯಕ್ಕೆ ಅಡ್ಡಿಯಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸರಕಾರ ವೈದ್ಯಕೀಯ ಸಂಸ್ಥೆಗಳು ಮತ್ತು ಜನಸಾಮಾನ್ಯರು ಸೇರಿ ವಿಜ್ಞಾನದೊಂದಿಗೆ ಕೈಜೋಡಿಸಿ ನಿಲ್ಲಬೇಕಾಗಿದೆ ಎಂದು ವಿವರಿಸಿದರು,
ಹಾಗಾದರೆ ಆರೋಗ್ಯವಂತ ವ್ಯಕ್ತಿ ಯಾರು? (ಡಬ್ಲ್ಯೂ ಎಚ್ ಓ)ಪ್ರಕಾರ ಆರೋಗ್ಯ ಎಂಬುದು ಕೇವಲ ರೋಗ ವಿಲ್ಲದಿರುವುದು ಮಾತ್ರವಲ್ಲ ಒಬ್ಬ ವ್ಯಕ್ತಿ ದೈಹಿಕವಾಗಿ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಉತ್ತಮವಾಗಿರುವ
ಇರುವ ವ್ಯಕ್ತಿಗೆ ಆರೋಗ್ಯವಂತ ವ್ಯಕ್ತಿ ಎನ್ನುತ್ತೇವೆ.
ಆಯುರ್ವೇದ ಗ್ರಂಥದ ಪ್ರಕಾರ ಆರೋಗ್ಯವೆಂದರೆ
” ಸಮದೋಷ ಸಮಾಗ್ನಿಶ್ಚ ಸಮಾಧಾತು ಮಲಕ್ರಿಯಾ ಪ್ರಸನ್ನಾತ್ಮೇಂದ್ರಿಯ ಮನಃ ಸ್ವಸ್ಥ ಇತ್ಯಭಿದಿಯತೆ”
ನಮ್ಮ ದೇಹದಲ್ಲಿ ವಾತ ಪಿತ್ತ ಕಫ ಎಂಬ ಮೂರು ದೋಷಗಳು ಸಮತೋಲನದಲ್ಲಿರುವುದು, ದೇಹದ ಜಠರಾಗ್ನಿ(ಡೈಜೆಸ್ಟಿವ್ ಫೈರ್) ಸಮವಾಗಿದ್ದು ಆಹಾರವನ್ನು ಸರಿಯಾಗಿ ಜೀರ್ಣಿಸುವುದು, ರಸ ರಕ್ತ ಮಾಂಸ ಮೇದ ಅಸ್ತಿ ಮಜ್ಜಾ ಶುಕ್ರ ಈ ಏಳು ಧಾತುಗಳು ಸಮವಾಗಿರುವುದು, ಮತ್ತು ಮಲ ಮೂತ್ರ ಸ್ವೇದ ಇವುಗಳ ವಿಸರ್ಜನೆ ವ್ಯವಸ್ಥಿತವಾಗಿ ನಡೆಯುವುದು, ಇದರೊಂದಿಗೆ ಆತ್ಮ ಪಂಚೇಂದ್ರಿಯಗಳು ಮನಸ್ಸು ಪ್ರಸನ್ನ ವಾಗಿದ್ದರೆ ಅಂತಹ ವ್ಯಕ್ತಿಗೆ ಆರೋಗ್ಯವಂತ ವ್ಯಕ್ತಿ ಎಂದು ಕರೆಯುತ್ತೇವೆ.
ಇಂತಹ ಉತ್ತಮ ಆರೋಗ್ಯವನ್ನು ಪಡೆಯಲು ನಾವು ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಿದರು,
ಸಮತೋಲನ ಆಹಾರ ಅಂದರೆ ಷಡ್ ರಸಯುಕ್ತ ಆಹಾರ ಪ್ರೋಟೀನ್ ಕಾರ್ಬೋಹೈಡ್ರೇಟ್ಸ್ ಉತ್ತಮ ಕೊಬ್ಬು ಹೊಂದಿರುವ ಮತ್ತು ಎಲ್ಲಾ ಖನಿಜಾಂಶಗಳನ್ನು ಹೊಂದಿರುವ ಆಹಾರ ಸೇವನೆ ಮತ್ತು ನಮ್ಮ ದೇಹಕ್ಕೆ ಬೇಕಾಗುವಷ್ಟು ನೀರಿನ ಸೇವನೆ.
ನಿಯಮಿತ ವ್ಯಾಯಾಮ ಅಂದರೆ ದಿನಕ್ಕೆ ಕನಿಷ್ಠ 30 ನಿಮಿಷ ನಡಿಗೆ ಯೋಗ ಪ್ರಾಣಾಯಾಮ ಮತ್ತು ಧ್ಯಾನ ಇವುಗಳನ್ನು ಅಳವಡಿಸಿಕೊಳ್ಳಬೇಕು, ಮಾನಸಿಕ ಆರೋಗ್ಯದ ಕಾಳಜಿ ಅಂದರೆ ಮನಸ್ಸಿನ ಒತ್ತಡದ ನಿಯಂತ್ರಣಕ್ಕಾಗಿ ಉತ್ತಮ ಪುಸ್ತಕಗಳನ್ನು ಓದುವುದು ಉತ್ತಮ ಸಂಗೀತ ಕೇಳುವುದು ದೇಹಕ್ಕೆ ವಿಶ್ರಾಂತಿ ಕೊಡುವುದು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದು.
ವೈಯಕ್ತಿಕ ಸ್ವಚ್ಛತೆ ಮತ್ತು ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು.
ವಿಶ್ವ ಆರೋಗ್ಯ ದಿನದ ಆಚರಣೆಯ ಜೊತೆಗೆ ನಮ್ಮ ಆರೋಗ್ಯದ ಬಗ್ಗೆ ಹೊಸಬದ್ಧತೆಯನ್ನು ಆರಂಭಿಸುವ ದಿನವಾಗಿದ್ದು ನಮ್ಮ ದೈನಂದಿನ ಜೀವನದ ಸಣ್ಣ ಬದಲಾವಣೆಗಳು ಕೂಡ ಬೃಹತ್ ಆರೋಗ್ಯದ ಸುಧಾರಣೆಗೆ ಕಾರಣವಾಗಬಹುದು, ನಮ್ಮ ಆರೋಗ್ಯ ನಮ್ಮ ಹೊಣೆಗಾರಿಕೆಯಾಗಿರಲಿ ಎಂದು ಕೊಪ್ಪಳದ ಶ್ರೀ ಅನ್ನಪೂರ್ಣೇಶ್ವರಿ ಆಸ್ಪತ್ರೆಯ ವೈದ್ಯರಾದ ಡಾ, ಕಸ್ತೂರಿ ಕರಮುಡಿ ರವರು ಸಾರ್ವಜನಿಕರ ಜಾಗೃತಿಗಾಗಿ ತಮ್ಮ ವಿಶೇಷ ಲೇಖನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ,


