ವಿಜಯಪುರ,ಏ.೬(ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರಿಗಾಗಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹಮದ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಟಕ್ಕೆ ಬಳಿಯಿರುವ ಸರ್ಕಾರಿ ಮುಸ್ಲಿಂ ವಸತಿ ಶಾಲೆ ಆವರಣದಲ್ಲಿ ಸ್ಥಳೀಯ ಅಲ್ಪಸಂಖ್ಯಾತರ ಕುಂದು ಕೊರತೆ ಹಾಗೂ ಹಾಗೂ ಅಲ್ಪಸಂಖ್ಯಾತ ಮಹಿಳೆಯರ ಮತ್ತು ಸ್ಥಳೀಯ ಮಹಿಳಾ ಅಧಿಕಾರೇತರ ಸಂಸ್ಥೆಗಳಿಗೆ ಸಾಕ್ಷರತೆಯನ್ನು ಪ್ರೇರೆಪಿಸುವ ಜಾಗೃತಿ ಮೂಡಿಸುವ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಲ್ಪಸಂಖ್ಯಾತರಿಗೆ ಸಮಸ್ಯೆಗಳಿದ್ದಲ್ಲಿ ಹಾಗೂ ಅವರು ತೊಂದರೆಗೊಳಗಾಗಿದ್ದಲ್ಲಿ ಪರಿಹರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಸರ್ಕಾರವು ವಿವಿಧ ಇಲಾಖೆಗಳಲ್ಲಿ ಅಲ್ಪ ಸಂಖ್ಯಾತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳ ಮಾಹಿತಿ ಪಡೆದುಕೊಂಡು ಯೋಜನೆಗಳ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು. ಆಯೋಗವು ಜನರ ಬಳಿಗೆ ಬಂದು ತಮ್ಮ ಸಮಸ್ಯೆ ಹಾಗೂ ಕುಂದು ಕೊರತೆಗಳನ್ನು ಆಲಿಸಿ, ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದರು.
ಈಗಾಗಲೇ ಅಲ್ಪಸಂಖ್ಯಾತರಿಗಾಗಿ ವಿದ್ಯಾರ್ಥಿ ವೇತನ, ಸ್ಕೂಲ್ ಬ್ಯಾಗ್, ಪುಸ್ತಕ, ಸಮವಸ್ತ್ರ ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೂ ಕೂಡ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಅಬ್ದುಲ್ ಕಲಾಂ ವಸತಿ ಶಾಲೆ ನಿರ್ಮಿಸಿದೆ. ತನ್ಮೂಲಕ ಮಕ್ಕಳ ಶಿಕ್ಷಣ ಹಾಗೂ ಅವರ ಸವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ವಿಶೇಷ ಕರ್ತವ್ಯಧಿಕಾರಿಗಳಾದ ಮುಜಿಬುಲ್ಲಾ ಜಪಾರಿ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಬೇಕು. ಅಲ್ಪಸಂಖ್ಯಾತ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿ ಅವರ ಶೈಕ್ಷಣಿಕ ಉನ್ನತಿಗೆ ಕಾಳಜಿ ವಹಿಸಬೇಕು ಎಂದರು. ಅಲ್ಪಸಂಖ್ಯಾತರಿಗೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸರಕಾರದ ಹಲವಾರು ಸೌಲಭ್ಯಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ರಿಶ್ಚಿಯನ್ ಸಮುದಾಯದ ಮುಖಂಡರಾದ ಚಂದ್ರು ಮಾತನಾಡಿ, ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಜನರಿಗೆ ಪ್ರೇರೆಪಣೆ ನೀಡಬೇಕು ಎಂದರು.
ಅಲ್ಪ ಸಂಖ್ಯಾತರ ಬಡಾವಣೆಗಳಲ್ಲಿ ವಿದ್ಯುತ್, ರಸ್ತೆ, ಒಳಚರಂಡಿ ಹಾಗೂ ಕುಡಿಯುವ ನೀರು ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವುದು.
ಜ್ಯೋತೆಂದ್ರ ಆಯತವಾಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಹೆಚ್ಚಿಸಿ, ಅದರ ಅನುದಾನ ಹೆಚ್ಚಿಸಬೇಕು ಎಂದರು.
ಇದೇ ವೇಳೆ ಆಯೋಗದ ಅಧ್ಯಕ್ಷರು, ವಿದ್ಯಾರ್ಥಿ ವೇತನ ಸೇರಿದಂತೆ ನಾನಾ ಕುಂದು ಕೊರತೆಗಳನ್ನು ಆಲಿಸಿದರು.
ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಪ್ರಶಾಂತ ಪೂಜಾರಿ, ಪ್ರಧಾನ ಮಂತ್ರಿ ೧೫ ಅಂಶಗಳ ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾದ ನೆಲ್ಸನ್ ನಾರ್ಮನ್ ಡಿಝಾಕ್, ಬಂದೇನವಾಜ್ ಮುಲ್ಲಾ, ಜೆ.ಜೆ. ಭಾಂಗಿ, ಮುಖಂಡರಾದ ಸಂತೋಷ ಕವಟೇಕರ, ಗುರಿಕಾರ ಸೇರಿದಂತೆ ವಿದ್ಯಾರ್ಥಿಗಳು, ನಾನಾ ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.


