ಗದಗ, ಎ. ೩ : ನಾವಿಂದು ಮಕ್ಕಳಿಗೆ ಅಕ್ಷರ ಶಿಕ್ಷಣ ಕೊಟ್ಟರೆ ಸಾಲದು ಅದರೊಟ್ಟಿಗೆ ನೈತಿಕ ಶಿಕ್ಷಣ, ವಾಸ್ತವಿಕ ಬದುಕಿನ ಚಿತ್ರಣ ಕೊಡಬೇಕಿದೆ ಎಂದು ಬೆಳ್ಳಟ್ಟಿ-ಕೊಕ್ಕರಗುಂದಿ- ನೀರಲಗಿಯ ಶ್ರೀ ರಾಮಲಿಂಗೇಶ್ವರ ದಾಸೋಹಮಠದ ಪೂಜ್ಯ ಬಸವರಾಜ ಮಹಾಸ್ವಾಮಿಗಳು ಹೇಳಿದರು.
ಗದುಗಿನ ಕಳಸಾಪೂರ ರಸ್ತೆಯ ವಿಶ್ವೇಶ್ವರಯ್ಯ ನಗರದ ವಿಘ್ನೇಶ್ವರ ಸೇವಾ ಸಮಿತಿಯು ಎರ್ಪಡಿಸಿದ್ದ ಆಂಜನೇಯ ಸ್ವಾಮಿ ಜಯಂತ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಮೊಬೈಲ್, ಕಂಪ್ಯೂಟರ್, ಇಂಟರ್‌ನೆಟ್‌ದಲ್ಲಿ ಮುಳುಗಿ ಹೋಗಿರುವ ನಮ್ಮ ಮಕ್ಕಳಿಗೆ ನಮ್ಮ ಸುತ್ತಮುತ್ತ ಏನು ನಡೆದಿದೆ. ಮಾನವೀಯ ಸಂಬಂಧಗಳೇನು ? ಮುಕ್ತ ಮಾರುಕಟ್ಟೆಯ ವ್ಯವಹಾರ ಜ್ಞಾನ, ಮನೆಯಲ್ಲಿ ತಂದೆ ತಾಯಿಗೆ ಸಹಾಯ ಮಾಡುವದು, ಕೃಷಿ ಪರಿಕರಗಳೇನು ಎಂಬುವುದನ್ನು ಪಾಲಕ ಪೋಷಕರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಎಲ್ಲದಕ್ಕೂ ಗೂಗಲ್, ವಿಕಿಪಿಡಿಯಾದಲ್ಲಿ ಹುಡುಕಿ ಬದುಕು ನಡೆಸುವದಲ್ಲ ನೈಜತೆ ಹಾಗೂ ಸ್ವಅನುಭವ ಬೇಕು ಎಂದರು.
ಹೈಟೆಕ್‌ದಿಂದಾಗಿ ಕುಟುಂಬದಲ್ಲಿ, ಸಂಬಂಧಿಕರಲ್ಲಿ ಮನುಷ್ಯ ಸಂಬಂಧಗಳು ಹೇಗೆಂಬುದನ್ನು ತಿಳಿಸಬೇಕು ಜೊತೆಗೆ ನೈತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಮ್ಮ ಮಕ್ಕಳನ್ನು ತೊಡಗಿಸಿ ಅವರಿಗೆ ಜ್ಞಾನ ನೀಡಬೇಕು. ಇಂದಿಲ್ಲಿ ಹನುಮ ಜಯಂತಿ ನೆಪದಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎರ್ಪಡಿಸಿದ್ದು ಸೂಕ್ತವಾಗಿದೆ. ಭಕ್ತಿ, ಜ್ಞಾನವಾಗಿ ಪರಿವರ್ತನೆಗೊಳ್ಳಲಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಇಂತಹ ವೇದಿಕೆಗಳು ಬೇಕು. ಅಂಕಲ್- ಆಂಟಿ ಹೊರತು ಪಡಿಸಿ ಉಳಿದವರ ಸಂಬಂಧಗಳನ್ನು ಪರಿಚಯಿಸುವ ಕಾರ್ಯ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ, ಗದಗ-ಬೆಟಗೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಅವರು ಮಾತನಾಡಿ ವಿಶ್ವೇಶ್ವರಯ್ಯ ನಗರದ ವಿಘ್ನೇಶ್ವರ ಸೇವಾ ಸಮಿತಿಯು ಬಹಳಷ್ಟು ಕ್ರಿಯಾಶೀಲತೆಯಿಂದ ಧಾರ್ಮಿಕ, ಸಾಮಾಜಿಕ, ವೈಚಾರಿಕ ಕಾರ್ಯಚಟುವಟಿಕೆಗಳನ್ನು ಮಾಡಿಕೊಂಡು ಬಂದಿದೆ. ಸುತ್ತಲಿನ ಪರಿಸರವನ್ನು ಜೊಕ್ಕಟವಾಗಿಟ್ಟುಕೊಂಡು ಮಾದರಿ ನಗರ-ಸಂಘಟನೆಗೆ ಹೆಸರಾಗಿದೆ ಎಂದರಲ್ಲದೆ ಸಮಿತಿಯ ಬೇಡಿಕೆಯ ಅನುಸಾರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ವಿಘ್ನೇಶ್ವರ ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರರಡ್ಡಿ ಫ. ಇನಾಮತಿ ಅವರು ಮಾತನಾಡಿ ನಗರದ ಸಮಸ್ತ ಭಕ್ತಾಧಿಗಳ ಸಹಕಾರದೊಂದಿಗೆ ಈ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾದವು. ಎಲ್ಲರೂ ಸಂಘಟಿಕರಾಗಿ ಒಳ್ಳೆಯ ಕಾರ್ಯ ಮಾಡೋಣ ಎಂದರು.
ವೇದಿಕೆಯ ಮೇಲೆ ಹಿರಿಯರಾದ ನಿವೃತ್ತ ಶಿಕ್ಷಕ ಬಿ.ಎಸ್.ಬೆಂತೂರ, ಸಮಿತಿಯ ಕಾರ್ಯದರ್ಶಿ ಪ್ರಕಾಶ ಬೆಂತೂರ, ನಗರಸಭೆಯ ಎಇಇ ಜೋಗದಂಡಕರ ಉಪಸ್ಥಿತರಿದ್ದರು. ಪ್ರಸಾದ ಸೇವೆಯನ್ನು ಜಿ.ಪವರ್ಸನ ಶ್ರೀಮತಿ ಶೈಲಾ, ಶ್ರೀನಿವಾಸರಡ್ಡಿ ಬೆಂತೂರ ಪರಿವಾರದವರು ಹಾಗೂ ಅಲಂಕಾರ ಸೇವೆಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಆರ್.ವ್ಹಿ.ಬೆಲಹುಣಸಿ, ಸಂದೇಶ ಪಾಟೀಲ ವಹಿಸಿಕೊಂಡಿದ್ದರು. ಸಮಾರಂಭದಲ್ಲಿ ದಾನಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆಂಜನೇಯ ಕಟಗಿ ಅವರು ವಿಶ್ವೇಶ್ವರಯ್ಯ ನಗರದಲ್ಲಿ ಆಗಿರುವ ಆಗಬೇಕಿರುವ ಕಾರ್ಯಗಳನ್ನು ವಿವರಿಸಿ ಇನ್ನಷ್ಟು ಮೂಲಭೂತ ಸೌಕರ್ಯ ಕುರಿತಾದ ಮನವಿಯನ್ನು ಪೌರಾಯುಕ್ತರಿಗೆ ಹಾಗೂ ಗದಗ-ಬೆಟಗೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಿಗೆ ಸಲ್ಲಿಸಿದರು.
ಶ್ರೀಮತಿ ಭಾಗ್ಯಾ ತೊಂಡಿಹಾಳ ಪ್ರಾರ್ಥಿಸಿದರು, ಸೋಮಪ್ಪ ಲಮಾಣಿ ಸ್ವಾಗತಿಸಿದರು, ನಿವೃತ್ತ ಪ್ರಾಚಾರ್ಯ ಪ್ರೊ.ಸಿ.ಲಿಂಗಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ನಿವೃತ್ತ ಪ್ರಾಚಾರ್ಯ ಎಂ.ಎಚ್.ಹುಲ್ಲೂರ ನಿರೂಪಿಸಿದರು ಕೊನೆಗೆ ಎಸ್.ಕೆ.ಖಂಡೆಪ್ಪಗೌಡರ ವಂದಿಸಿದರು.
ನಂತರ ಸ್ಥಾವರಮಠ ಸ್ಕಿಲ್ಸ್ ಅಕಾಡೆಮಿ (ರಿ) ಗದಗ, ಚಂದ್ರಕಲಾ ನೃತ್ಯ ವಿಹಾರ ತಂಡದವರಿಂದ ನೃತ್ಯ ಪ್ರದರ್ಶನ ಹಾಗೂ ಗಣೇಶ ಮೆಲೋಡಿ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
ಬೆಳಿಗ್ಗೆ ಆಂಜನೇಯ ಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ, ಮಹಾರುದ್ರಾಭಿಷೇಕ, ಬಾಲಮಾರುತಿ ತೊಟ್ಟಿಲೋತ್ಸವ, ಜೋಗುಳ, ಮುತ್ತೈದೆಯರಿಗೆ ಉಡಿ ತುಂಬುವುದು, ಕೋಟಿ ಓಂ ನಮಃ ಶಿವಾಯ ಜಪ ಮಹಾಮಂಗಲ, ಶ್ರೀ ರುದ್ರ ಹೋಮ, ಮಧ್ಯಾಹ್ನ ಮಹಾಅನ್ನಸಂತರ್ಪಣೆ ಜರುಗಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.
= = =
ಫೋಟೋ ಇದೆ : ಬಸವರಾಜ ಶ್ರೀಗಳು
= = =
ಸುದ್ದಿ ಪ್ರಕಟಣೆ ಕೃಪೆಗೆ/ ಆಂಜನೇಯ ಕಟಗಿ, ಗದಗ.
ವಿಘ್ನೇಶ್ವರ ಸಮಿತಿಯಿಂದ ಆಂಜನೇಯ ಸ್ವಾಮಿ ಜಯಂತಿ | ಬಸವರಾಜ ಶ್ರೀಗಳ ನುಡಿ ಮಕ್ಕಳಿಗೆ ನೈತಿಕ ಶಿಕ್ಷಣ, ವಾಸ್ತವಿಕ ಬದುಕಿನ ಚಿತ್ರಣ ಕೊಡಬೇಕು


