ಬಳ್ಳಾರಿ,03..: ತಾಲ್ಲೂಕಿನ ಹಿರೇಹಡ್ಲಿಗಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ಅತ್ಯಂತ ವೈಭವ ಹಾಗೂ ಸಡಗರ ಸಂಭ್ರಮದಿಂದ ನೆರವೇರಿತು.
ಹನುಮಾನ್ ಜಯಂತಿ ಹಿನ್ನೆಲೆ
ಗ್ರಾಮದ ಆರಾದ್ಯದೈವ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಲು ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಸ್ವಾಮಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.
ಸಂಜೆ ನಿಗದಿತ ಶುಭ ಮುಹೂರ್ತದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಅಲಂಕೃತಗೊಂಡ ರಥದಲ್ಲಿ ಆಂಜನೇಯ ಸ್ವಾಮಿಯ ರಥೋತ್ಸವನ್ನು ಭಕ್ತರು ಭಕ್ತಿಯ ಜಯಘೋಷಗಳೊಂದಿಗೆ ರಥವನ್ನು ಎಳೆದರು.
ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ರಥಯಾತ್ರೆಯು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಾಗಿ ವಾಲ್ಮೀಕಿ ವೃತ್ತದವರೆಗೆ ಅತ್ಯಂತ ಅದ್ದೂರಿಯಾಗಿ ತಲುಪಿತು.
ರಥವು ಸಾಗುವ ಮಾರ್ಗದುದ್ದಕ್ಕೂ ಭಕ್ತರು ಬಾಳೆಹಣ್ಣು ಮತ್ತು ಉತ್ತತ್ತಿಯನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು. ವಿವಿಧ ಮೇಳಗಳ ವಾದ್ಯಘೋಷಗಳು, ಭಜನಾ ತಂಡಗಳ ಹಾಡುಗಳು ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿದವು.
ವಾಲ್ಮೀಕಿ ವೃತ್ತದ ಬಳಿ ರಥವು ಬಂದಾಗ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ಗ್ರಾಮದ ಹಿರಿಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಯುವಕ ಸಂಘದ ಸದಸ್ಯರು ರಥೋತ್ಸವದ ಯಶಸ್ಸಿಗೆ ಶ್ರಮಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ಶಿಸ್ತನ್ನು ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು. ರಥೋತ್ಸವದ ನಂತರ ಭಕ್ತಾದಿಗಳಿಗೆ ಭಕ್ತಾಧಿಗಳು ಅನ್ನಸಂತರ್ಪಣೆ (ಪ್ರಸಾದ) ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು, ಮಕ್ಕಳು, ಮಹಿಳೆಯರು ಭಾಗವಹಿಸಿದ್ದರು.


