ಸಿಲೆಂಡರ್ ಸಂಕಷ್ಟ: ಮುಂಜಾನೆಯಿಂದಲೇ ಸಾಲಿನಲ್ಲಿ ಜನರ ನರಳಾಟ

MK HasiruKranti
ಸಿಲೆಂಡರ್ ಸಂಕಷ್ಟ: ಮುಂಜಾನೆಯಿಂದಲೇ ಸಾಲಿನಲ್ಲಿ ಜನರ ನರಳಾಟ
WhatsApp Group Join Now
Telegram Group Join Now
ಬಳ್ಳಾರಿ: 03.ಜಿಲ್ಲೆಯಲ್ಲಿ ಅಡುಗೆ ಅನಿಲದ ತೀವ್ರ ಕೊರತೆ ಕಾಣಿಸಿಕೊಂಡಿದ್ದು, ಗ್ರಾಹಕರು ಸಿಲೆಂಡರ್‌ಗಾಗಿ ಮುಂಜಾನೆಯಿಂದಲೇ ಸಾಲಿನಲ್ಲಿ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕುರುಗೋಡು ತಾಲೂಕಿನ ಕೋಳೂರು ಗ್ರಾಮದಲ್ಲಿ ಈ ಸಂಕಷ್ಟ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಗ್ರಾಮದಲ್ಲಿರುವ ಗ್ಯಾಸ್ ಗೋಡೌನ್ ಮುಂದೆ ಇಂದು ಮುಂಜಾನೆ 6 ಗಂಟೆಯಿಂದಲೇ ಮಹಿಳೆಯರು, ಹಿರಿಯರು, ಮಕ್ಕಳು ಸೇರಿದಂತೆ ನೂರಾರು ಜನರು ಸಾಲಿನಲ್ಲಿ ಕುಳಿತಿದ್ದು, ಅಡುಗೆ ಅನಿಲ ತುಂಬಿದ ಲೋಡ್ ವಾಹನ ಬರುವ ನಿರೀಕ್ಷೆಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು. ಕೆಲವರು ರಾತ್ರಿ ಹೊತ್ತಿಗೇ ಬಂದು ಸ್ಥಳ ಕಾಯ್ದುಕೊಂಡಿದ್ದಾರೆಯೆಂಬ ಮಾಹಿತಿಯೂ ಲಭ್ಯವಾಗಿದೆ.
ಸಿಲೆಂಡರ್ ಕೊರತೆಯಿಂದಾಗಿ ದಿನನಿತ್ಯದ ಅಡುಗೆ ಕಾರ್ಯವೇ ಅಸ್ತವ್ಯಸ್ತಗೊಂಡಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಿವೆ. ವಿಶೇಷವಾಗಿ ಮಹಿಳೆಯರು, ಅಂಗವಿಕಲರು ಮತ್ತು ವೃದ್ಧರು ಗ್ಯಾಸ್ ಪಡೆಯಲು ಹರಸಾಹಸ ಪಡುತ್ತಿರುವ ದೃಶ್ಯಗಳು ಮನಕಲುಕುವಂತಿವೆ.
ಲೋಡ್ ವಾಹನ ಬರುವ ಸೂಚನೆ ದೊರಕುತ್ತಿದ್ದಂತೆ ಜನರು ಆತುರದಲ್ಲಿ ಮುಗ್ಗರಿಸಿ ಮುಂದೆ ಸಾಗಲು ಯತ್ನಿಸುತ್ತಿದ್ದು, ಕೆಲವೊಮ್ಮೆ ತಳ್ಳಾಟ-ಒದ್ದಾಟವೂ ಉಂಟಾಗುತ್ತಿದೆ. ಸರಿಯಾದ ವ್ಯವಸ್ಥೆಯ ಕೊರತೆಯಿಂದ ಗೊಂದಲ ಹೆಚ್ಚುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
“ಪ್ರತಿದಿನವೂ ಇದೇ ಪರಿಸ್ಥಿತಿ. ಮುಂಜಾನೆ ಬಂದರೂ ಸಿಲೆಂಡರ್ ಸಿಗುವುದಕ್ಕೆ ಖಚಿತತೆ ಇಲ್ಲ. ದಿನಗೂಲಿ ಕೆಲಸ ಬಿಟ್ಟು ಇಲ್ಲಿ ಕಾದು ಕುಳಿತುಕೊಳ್ಳಬೇಕಾಗಿದೆ,” ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಸ್ಯೆ ಕುರಿತು ಅಧಿಕಾರಿಗಳು ತಕ್ಷಣ ಗಮನಹರಿಸಿ, ಸಮರ್ಪಕವಾಗಿ ಅನಿಲ ಸರಬರಾಜು ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನಿಯಂತ್ರಣ ವ್ಯವಸ್ಥೆ ಬಲಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
WhatsApp Group Join Now
Telegram Group Join Now
Share This Article