ಗಜೇಂದ್ರಗಡ, ಏಪ್ರಿಲ್. 15: ಈಚೆಗೆ ಪ್ರಕಟಗೊಂಡ ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಜೇಂದ್ರಗಡ ಪಟ್ಟಣದ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 163 ವಿದ್ಯಾರ್ಥಿಗಳಲ್ಲಿ 136 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಾಲೇಜಿನ ಒಟ್ಟು ಫಲಿತಾಂಶ ಶೇ 83.43 ರಷಾಗಿದ್ದು. ಇದರಲ್ಲಿ 21 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಆದ್ದರಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳ ಮನೆ-ಮನೆಗೆ ಹೋಗುತ್ತಿರುವ ಕಾಲೇಜಿನ ಉಪನ್ಯಾಸಕರು ಪಾಲಕರ ಸಮ್ಮುಖದಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿ ಸನ್ಮಾನ ಮಾಡುತ್ತಿದ್ದಾರೆ.
ವಾಣಿಜ್ಯ ವಿಭಾಗದ ಶ್ರೇಯಾ ಸಿದಲಿಂಗ್ ಶೇ 96.66, ಸೀತಾ ಜೋಶಿ ಶೇ 95.16, ದ್ವಿತೀಯ, ಆಶಾ ಸೋಪಡ್ಲಾ ಶೇ 91.16 ಹಾಗೂ ವಿಜ್ಞಾನ ವಿಭಾಗದ ಸುವರ್ಣಾ ವರಗಾ ಶೇ 90.16, ಸ್ನೇಹಾ ರಾಯಬಾಗಿ ಶೇ 90.16, ದೀಪಾ ಗೂಡುರ ಶೇ 89.83 ಸೇರಿದಂತೆ ಅನೇಕ ವಿದ್ಯಾರ್ಥಿಗಳ ಮನೆಗೆ ಈಚೆಗೆ ಭೇಟಿ ನೀಡಿದರು. ಈ ವೇಳೆ ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳಿಗೆ ಮುಂದಿನ ಸವಾಲುಗಳ ಕುರಿತು ಹಾಗೂ ಲಭ್ಯವಿರುವ ಕೋರ್ಸ್ ಮತ್ತು ಅವಕಾಶಗಳ ಕುರಿತು ಮಾಹಿತಿ ನೀಡಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಪಾಲಕರಿಗೆ ಲಭ್ಯವಿರುವ ಶಿಷ್ಯವೇತನಗಳ ಬಗ್ಗೆಯೂ ತಿಳಿಸಿದರು. ಇದರಿಂದ ಪಾಲಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಮುಂದಿನ ಶಿಕ್ಷಣದ ಕುರಿತು ಆತ್ಮವಿಶ್ವಾಸ ಹೆಚ್ಚಿದೆ.
ಈ ವೇಳೆ ಮಾತನಾಡಿದ ಪ್ರಾಚಾರ್ಯ ವಸಂತರಾವ್ ಗಾರಗಿ, ಸಾಧನೆ ಮಾಡಿದ ವಿದ್ಯಾರ್ಥಿಗಳ ಮನೆಮನೆಗೆ ಹೋಗಿ ಗೌರವಿಸುತ್ತಿರುವ ಕಾರಣ ಪಾಲಕರ ಹಾಗೂ ಉಪನ್ಯಾಸಕರ ನಡುವೆ ಬಾಂಧವ್ಯ ಗಟ್ಟಿಯಾಗಿದೆ. ಮನೆಯ ಸದಸ್ಯರು ನಮ್ಮನ್ನು ಗೌರವದಿಂದ ಸ್ವಾಗತಿಸುತ್ತಾರೆ. ವಿದ್ಯಾರ್ಥಿಗಳ ಗಮನಾರ್ಹ ಸಾಧನೆಯೂ ನಮಗೆ ಮನೆಗೆ ಭೇಟಿ ನೀಡುವಷ್ಟು ಖುಷಿ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬಿ. ಎಸ್. ಹಿರೇಮಠ, ಗೋಪಾಲ ರಾಯಬಾಗಿ, ರವಿ ಹಲಗಿ, ಬಸವರಾಜ ಸಂಕದಾಳ, ಸಂಗೀತಾ ನಾಲತವಾಡ, ಸಂಗಮೇಶ ವಸ್ತ್ರದ, ಪ್ರತಿಭಾ ಲಕ್ಷಕೊಪ್ಪದ, ವಿಜಯಲಕ್ಷ್ಮೀ ಅರಳಿಕಟ್ಟಿ, ಪ್ರೀತಿ ಹೊಂಬಳ, ಎ. ಡಿ. ಜಾತಗೇರ, ಪ್ರಶಾಂತ ಗಾಳಪೂಜಿಮಠ, ಮನೋಜ ವೈ. ಕಲಾಲ, ಶಿವಾನಂದ ಹಳ್ಳದ, ದೇವರಾಜ ಶೆಟ್ಟರ ಇದ್ದರು.