ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಪೊಲೀಸರು ನೊಂದವರ ಭರವಸೆಯ ಆಶಾಕಿರಣ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಹಗಲಿರುಳು ಶ್ರಮಿಸುವ ಪೊಲೀಸರ ಕಾರ್ಯ ಅನನ್ಯ: ಜಿಲ್ಲಾಧಿಕಾರಿ ಡಾ.ಆನಂದ ಕೆ.

MK HasiruKranti
ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಪೊಲೀಸರು ನೊಂದವರ ಭರವಸೆಯ ಆಶಾಕಿರಣ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಹಗಲಿರುಳು ಶ್ರಮಿಸುವ ಪೊಲೀಸರ ಕಾರ್ಯ ಅನನ್ಯ: ಜಿಲ್ಲಾಧಿಕಾರಿ ಡಾ.ಆನಂದ ಕೆ.
WhatsApp Group Join Now
Telegram Group Join Now
ವಿಜಯಪುರ,ಏಪ್ರಿಲ್.೦೨(ಕರ್ನಾಟಕ ವಾರ್ತೆ): ವರ್ಷದುದ್ದಕ್ಕೂ ಸದಾ ಒತ್ತಡದ ಮಧ್ಯೆಯೇ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ನೆಮ್ಮದಿಯ ಜೀವನಕ್ಕಾಗಿ, ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪೊಲೀಸರು ನಿಭಾಯಿಸುವ ಕರ್ತವ್ಯಕ್ಕೆ ಬೆಲೆ ಕಟ್ಟಲಾಗದು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಪೊಲೀಸರ ಕಾರ್ಯವನ್ನು ಬಣ್ಣಿಸಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಲ್ಲಿನ ಪೊಲಿಸ್ ಕವಾಯತು ಮೈದಾನದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸದಾ ಸಮಾಜದ ಒಳಿತಿಗಾಗಿ ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ಹಗಲಿರುಳು ಶ್ರಮಿಸುವ ಪೊಲೀಸರು ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಜಿಲ್ಲೆಯ ಪೊಲೀಸರ ಕಾರ್ಯದಕ್ಷತೆಗೆ ಹೆಸರುವಾಸಿಯಾಗಿದ್ದಾರೆ. ಇದಕ್ಕೆ ತಾಜಾ ನಿದರ್ಶನವೇ ಇತ್ತೀಚೆಗಷ್ಟೇ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿ, ಸಿಬ್ಬಂದಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನವಾಗಿದ್ದು, ಹೆಮ್ಮ ತರುವುದರ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ದಕ್ಷ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದರು.
ಪೊಲೀಸ್ ಇಲಾಖೆ ಸಿಬ್ಬಂದಿ ಹಗಲಿರುಳು ಸಾರ್ವಜನಿಕರು ಶಾಂತಿ-ನೆಮ್ಮದಿಗಾಗಿ ತಮ್ಮ ಕರ್ತವ್ಯ ಮೀಸಲಿಡುತ್ತಾರೆ. ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ, ಪ್ರಕೃತಿ ವಿಕೋಪದಂತಹ ಘಟನೆಗಳಲು ಘಟಿಸಿದಾಗ, ಅಪರಾಧ ಪ್ರಕರಣ ನಡೆಯದಂತೆ ತಡೆಗಟ್ಟುತ್ತಾರೆ. ಮಾತ್ರವಲ್ಲ ತುರ್ತು ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಸಾರ್ವಜನಿಕರ ನೆಮ್ಮದಿಗೋಸ್ಕರ ಮಿಡಿಯುವ ಪೊಲೀಸರ ಕಾರ್ಯ ಅದು ಕಾರ್ಯವಲ್ಲ. ಬದಲಿಗೆ ಅದು ಸಾರ್ವಜನಿಕರ ವಿಶ್ವಾಸ ಹಾಗೂ ನೆಮ್ಮದಿಯ ಜೀವನದ ಆಶಾಭಾವ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ಹೇಳಿದರು.
ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕಾರ್ಯ ಮಾಡುತ್ತ, ನೊಂದವರಿಗೆ ಭರವಸೆ ಆಶಾಕಿರಣವಾಗಿ, ಸುಖ ಶಾಂತಿ ನೆಲೆಸಲು ಸಮಾಜದಲ್ಲಿ ಜನರು ನೆಮ್ಮದಿಯ ಜೀವನ ನಡೆಸಲು ಪೊಲೀಸರು ದಿನವಿಡಿ ತಮ್ಮ ಕಾರ್ಯದ ಮೂಲಕ ಜನರಲ್ಲಿ ವಿಶ್ವಾಸದ ತಾಣವಾಗಿದ್ದಾರೆ ಎಂದರು. ನಮ್ಮ ಪೊಲೀಸರ ನಿಸ್ವಾರ್ಥ ಸೇವೆ, ಅವರ ಧೈರ್ಯ, ಶೌರ್ಯ, ಕಾರ್ಯ ನಿಷ್ಠೆಯ ಗೌರವಿಸುವ ಈ ಸುಸದಂರ್ಭವಾಗಿದೆ. ಪೊಲೀಸ್ ಕಲ್ಯಾಣ ನಿಧಿಯಿಂದ ಪೊಲೀಸ್ ಸಮುದಾಯ ಭವನ, ಕ್ರೀಡಾ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ. ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸರ ಕಲ್ಯಾಣಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ಈ ನಿಧಿ ವಿನಿಯೋಗಿಸುವ ಮೂಲಕ ನೈತಿಕ ಬೆಂಬಲ ನೀಡುತ್ತಿರುವುದರಿಂದ ಮತ್ತಷ್ಟು ಅವರ ಆತ್ಮಬಲ ವೃದ್ಧಿಯಾಗಿದೆ ಎಂದರು.
ಪೊಲೀಸರ ಸಮಸ್ಯೆಗಳನ್ನು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವ ಮೂಲಕ ಸದಾಕಾಲ ಜಿಲ್ಲಾಡಳಿತ ಸ್ಪಂದಿಸಲಿದೆ ಎಂದು ಅವರು ಹೇಳಿದರು. ಪೊಲೀಸ್ ಇಲಾಖೆಯು ಕೆಲಸದ ಒತ್ತಡದ ಮಧ್ಯವೂ ಸಮಾಜಕ್ಕೆ ನಮ್ಮಿಂದ ಕೊಡುವ ಭದ್ರತಾ ಭಾವನೆ. ಇದೊಂದು ಬದ್ಧತೆಯನ್ನು ಒದಗಿಸುತ್ತದೆ. ಟ್ರಾಫಿಕ್ ಸಮಸ್ಯೆಯಿಂದ ಹಿಡಿದು, ಅಪರಾಧ ತಡೆಗಟ್ಟುವುದು ಸೇರಿದಂತೆ ಇಲಾಖೆ ಮೊದಲಾದ್ಯತೆ ನೀಡಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದಿಂದ ಕೈಜೋಡಿಸಿ ಉತ್ತಮ ಕಾರ್ಯ ನಿರ್ವಹಣೆಯೆಡೆಗೆ ಪ್ರತಿಯೊಬ್ಬ ಸಿಬ್ಬಂದಿ ಸಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಜಿಲ್ಲೆಯ ಕಾನೂನು ಸುವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಪೊಲೀಸರ ಕಾರ್ಯ ಅಪ್ರತಿಮವಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆ ಕಾಪಾಡಿ ಸಮಾಜದಲ್ಲಿ ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ. ಪೊಲೀಸರ ಕಾರ್ಯ ಸರಳವಲ್ಲ ಅದೊಂದು,ಅತ್ಯಂತ ಕಠಿಣ ಕೆಲಸ. ನಾವೆಲ್ಲ ನೋಡಿದ್ದೇವೆ. ಅಪರಾಧ ತಡೆ ಸೇರಿದಂತೆ ಯಾವುದೇ ಅಪರಾಧ ತಡೆಗೆ ತುರ್ತು ಸ್ಪಂದನೆ ಪೊಲೀಸರದ್ದಾಗಿದೆ. ತಂತ್ರಜ್ಞಾನ ಯುಗದಲ್ಲಿ ಅಪರಾಧ ಪ್ರಕರಣಗಳ ಸ್ವರೂಪ ಬೇರೆ ಬೇರೆಯಾಗಿದೆ. ಪೊಲೀಸ್ ಸೇವೆ ಸ್ವರೂಪ ಗಮನಾರ್ಹ ಬದಲಾವಣೆಯಾಗಿದ್ದು, ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಿ, ತಂತ್ರಜ್ಞಾನದ ಬಳಕೆಯಿಂದ ಅಪರಾಧಗಳ ಪ್ರಕರಣಗಳನ್ನು ಬೇಧಿಸಲು ಸಹಾಯಕವಾಗಿದೆ ಎಂದು ಅವರು ಹೇಳಿದರು.
ಪರಿಶ್ರಮ ಅವರ ಸಮರ್ಪಣಾ ಸೇವಾ ಮನೋಭಾವ ಅತ್ಯಂತ ಪ್ರಶಂಸನೀಯವಾಗಿದೆ. ಪೊಲೀಸರು ಸುಗಮ ಕಾರ್ಯ ನಿರ್ವಹಣೆಗೆ ಅವರ ಕುಟುಂಬದವರ ನೈತಿಕ ಬೆಂಬಲವನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು, ಪೊಲೀಸ್ ಇಲಾಖೆಗೆ ಜಿಪಂ ಸಹಕಾರ ನೀಡಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ಈ ದಿನದಂದು ಹೆಚ್ಚು ಶ್ರದ್ಧಾಪೂರ್ವಕವಾಗಿ, ರಚನಾತ್ಮಕವಾಗಿ ಮತ್ತು ನಿಷ್ಠೆಯೊಂದಿಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ನಮ್ಮ ಸಂಕಲ್ಪವನ್ನು ಮತ್ತಷ್ಟು ದೃಢಪಡಿಸಿಕೊಳ್ಳುವುದಾಗಿದೆ ಎಂದರು.
ಇಲಾಖೆಯಲ್ಲಿ ಅನೇಕ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪೊಲೀಸರ ಸೇವೆ, ತ್ಯಾಗ ಮನೋಭಾವನೆ ಗೌರವಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ, ಧ್ವಜಗಳ ಮಾರಾಟದಿಂದ ಸಂಗ್ರಹವಾದ ವಂತಿಗೆಯನ್ನು ನಿವೃತ್ತ ಮತ್ತು ಸೇವಾ ನಿರತ ಪೊಲೀಸರ ಕ್ಷೇಮಾಭಿವೃದ್ದಿಗೆ ಉಪಯೋಗಿಸಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಪೊಲೀಸರ ಸಲುವಾಗಿ ಹಲವಾರು ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಪೊಲೀಸ್ ಸಮುದಾಯ ಭವನ, ಪೊಲೀಸರ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಡಿಆರ್ ಘಟಕದಲ್ಲಿ ಅತಿಥಿ ಗೃಹವೂ ಇದೆ. ಪೊಲೀಸ್ ಕಲ್ಯಾಣ ನಿಧಿಯಿಂದ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ, ವೈದ್ಯಕೀಯ ಸಹಾಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಶೇ.೫೦ರಷ್ಟು ಅನುದಾನವನ್ನು ನಿವೃತ್ತ ಅಧಿಕಾರಿಗಳ ಪೊಲೀಸ್ ಕಲ್ಯಾಣ ನಿಧಿಗೆ ಶೇ.೫೦ ರಷ್ಟನ್ನು ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ಜಮೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲೆಯ ಕೀರ್ತಿ ಹೆಚ್ಚಿಸುವ ದಿಸೆಯಲ್ಲಿ ಕಾರ್ಯಪ್ರವತ್ತರಾಗೋಣ ಎಂದರು.
ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಕೆ.ಮಾರಿಹಾಳ ಅವರು ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ಇತಿಹಾಸ ತ್ಯಾಗ ಶೌರ್ಯ ಅಚಲ ನಿಷ್ಠೆಯ ಪ್ರತಿಬಿಂಬವಾಗಿದೆ. ಧ್ವಜದಡಿ ಸೇವೆ ಮಾಡಿರುವ ಪ್ರತಿ ಹೃದಯದಲ್ಲಿ ದೇಶ ಭಕ್ತಿ,ಕರ್ತವ್ಯ ನಿಷ್ಠೆ ಮತ್ತು ಸೇವಾ ಮನೋಭಾವ ಹೊಂದಿರುತ್ತಾರೆ. ಪೊಲೀಸ್ ಧ್ವಜವೂ ಚಿಹ್ನೆಯಲ್ಲ. ಅದೊಂದು ಮಹತ್ವದ್ದು. ಇದು ಕರ್ತವ್ಯವಲ್ಲ. ಇದೊಂದು ಬದ್ಧತೆ, ಜನರ ವಿಶ್ವಾಸವನ್ನು ಕಾಪಾಡುವ ಪವಿತ್ರ ಜವಾಬ್ದಾರಿಯಾಗಿದೆ ಎಂದು ಪೊಲೀಸರ ಕರ್ತವ್ಯವನ್ನು ಪ್ರಶಸಂಸಿದರು.
ಆಕರ್ಷಕ ಪಥಸಂಚಲನ: ಪರೇಡ್ ಕಮಾಂಡರ್ ಐ.ಎಸ್. ತೇಲಿ ಅವರ ನೇತೃತ್ವದಲ್ಲಿ ಆರ್.ಎಸ್.ಐ ಮಲ್ಲನಗೌಡ ಗುತ್ತರಗಿ, ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಸೀತಾರಾಮ ಲಮಾಣಿ, ಮನಗೂಳಿ ಪೋಲೀಸ್ ಠಾಣೆಯ ವಿಜಯಕುಮಾರ ರಾಠೋಡ, ಗೋಲಗುಂಬಜ್ ಪಿಎಸ್‌ಐ ಎಂ.ಡಿ.ಗೋರಿ, ಸಿಂದಗಿ ಪಿಎಸ್ ಐ ಮಲಕನಗೌಡ ಬಿರಾದಾರ, ಕೂಡಗಿ ಪೊಲೀಸ್ ಠಾಣೆಯ ಪಿಎಸ್‌ಐ ಯತೀಶ ಕೆ.ಎನ್, ಗಾಂಧಿವೃತ್ತ ಠಾಣೆ ಪಿಎಸ್ ಐ ಸುಷ್ಮಾ ನಂದಗೋಳ ಒಳಗೊಂಡ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟರು.
ಅರ್ಜುನ ಭಜಂತ್ರಿ ಹಾಗೂ ಸುರೇಶ ಉತ್ಲಾಸಕರ ನೇತೃತ್ವದ ತಂಡ ಕದಮ್, ಕದಮ್ ಬಡಾಯೆ ಜಾಯೆ ಸೇರಿದಂತೆ ಸುಶ್ರಾವ್ಯ ಸಂಗೀತದ ನಿನಾದ ಬ್ಯಾಂಡ್ ಮೂಲಕ ನುಡಿಸಿದರು.
ಕಾರ್ಯಕ್ರಮದಲ್ಲಿ ಲೋಕಾಯುಕ್ತ ಪೊಲೀಸ್  ಅಧೀಕ್ಷಕ ಟಿ.ಮಲ್ಲೇಶ, ಐಆರ್‌ಬಿ ಡೆಪ್ಯೂಟಿ ಕಮಾಂಡೆಂಟ್ ರಾಚಪ್ಪ ಕಾಜಗಾರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ನಾಗರಾಜ ಡಿ. ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿ,ಸಿಬ್ಬಂದಿ ಸಾರ್ವಜನಿಕರು ಭಾಗವಹಿಸಿದ್ದರು.
ನಿವೃತ್ತ ಶಿಕ್ಷಕ ಎಚ್.ಎ.ಮಮದಾಪುರ ಹಾಗೂ ದಶರಥ ಕಾರ್ಯಕ್ರಮ ನಿರೂಪಿಸಿದರು.
(ಫೋಟೋ ಲಗತ್ತಿಸಿದೆ. ಎ-೧ ರಿಂದ ೬ರವರೆಗೆ)
WhatsApp Group Join Now
Telegram Group Join Now
Share This Article