ಹುನಗುಂದ: ತಾಲೂಕಿನ ಹಡಗಲಿ ಗ್ರಾಮದಲ್ಲಿ ಏ.೧ ಮತ್ತು ಏ.೨ ರಂದು ಲಿಂಗೈಕ್ಯ ಮಹಾನ ತಪಸ್ವಿಶ್ರೀ ರುದ್ರಮುನಿ ಶಿವಯೋಗಿಶ್ವರ ಮಹಾ ರಥೋತ್ಸವ ಹಾಗೂ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಜರುಗಲಿದೆ.
ಏ.೨ ರಂದು ಗುರುವಾರ ಸಾಯಂಕಾಲ ೪ ಗಂಟೆಗೆ ಸುಮಂಗಲಿಯರ ಆರತಿ ಕಳಸ, ಸಕಲ ವಾದ್ಯ ವೈಭವದೊಂದಿಗೆ ರುದ್ರೇಶ್ವರ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
ನಂತರ ಗಂಗೂರು ಗ್ರಾಮದಿಂದ ಕಳಸ, ಹಿರೇಮಳಗಾವಿ ಗ್ರಾಮದಿಂದ ಹಗ್ಗ, ಕಿರಸೂರ ಮತ್ತು ಹೂವನೂರ ಗ್ರಾಮದಿಂದ ತಳಿರು ತೋರಣ ಬಾಳೆಕಂಬ, ನಂದಿ ಕೋಲು ಆಗಮಿಸುವವು. ಸಾಯಂಕಾಲ ೫ ಗಂಟೆಗೆ ಶ್ರೀ ರುದ್ರೇಶ್ವರ ಮಹಾರಥೋತ್ಸವ ಜರುಗುವುದು. ರಾತ್ರಿ ೧೦.೩೦ ಗಂಟೆಗೆ ಶ್ರೀ ರುದ್ರೇಶ್ವರ ಯುವಕ ಮಂಡಳಿ ವತಿಯಿಂದ ಸಾಂಸ್ಕೃತಿಕ ಹಾಗೂ ಮನರಂಜನೆ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ. ರಾತ್ರಿ ೧೦ ಗಂಟೆಗೆ ಸೋಲಾಪೂರದ ಸಿದ್ದರಾಮೇಶ್ವರ ನಾಟ್ಯ ಸಂಘದಿಂದ ಸೊಕ್ಕಿನ ಸೊಸೆ ಎಂಬ ಸುಂದರ ಸಾಮಾಜಿಕ ನಾಟಕ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


