ಬಳ್ಳಾರಿ, ಏ. 01: ದೇಶದ ಸಾಂಪ್ರದಾಯಿಕ ‘ಅರೆಂಜ್ ಮ್ಯಾರೇಜ್’ ಮಹತ್ವವನ್ನು ಪ್ರತಿಬಿಂಬಿಸುವ “ಬಿಜಿಎಂ” ಚಿತ್ರದ ಚಿತ್ರೀಕರಣ ಇಂದು ನಗರದ ದುರ್ಗಮ್ಮ ದೇವಸ್ಥಾನದ ಸಮೀಪ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ನಗರದ ಮೇಯರ್ ಪಿ. ಗಾದೆಪ್ಪ ಚಾಲನೆ ನೀಡಲಿದ್ದಾರೆ ಎಂದು ಚಿತ್ರದ ನಿರ್ದೇಶಕ ರಮೇಶ್ ಭೀಮರಾಯಪ್ಪ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಾಯಣದ ವಸ್ತು ತಳಹದಿಯೊಂದಿಗೆ ತ್ರಿಕೋನ ಪ್ರೇಮಕಥೆಯನ್ನು ಒಳಗೊಂಡಿರುವ ಈ ಚಿತ್ರವನ್ನು ನಗರ, ಗ್ರಾಮೀಣ ಪ್ರದೇಶಗಳು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುವುದು ಎಂದರು.
ಬೇರೆ ಬೇರೆ ಚಿತ್ರಗಳಿಗೆ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡು ಬರೆದಿರುವ ಕಿನ್ನಾಳ್ ರಾಜು ಸಂಗೀತ ಸಾಹಿತ್ಯ ಒದಗಿಸಿದ್ದು, ಸಂಭಾಷಣೆ ಹಾಗೂ ಕಥೆಯನ್ನು ಬೆಂಗಳೂರಿನ ನಟ ಮಲ್ಲಿಕಾರ್ಜುನ ನಿರ್ವಹಿಸಿದ್ದಾರೆ. ದಿನೇಶ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಪೂಜಾ ಕೊಟ್ಟೂರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀ ಚಕ್ರ ಫಿಲಿಂಸ್ ಸಂಸ್ಥೆ ಚಿತ್ರವನ್ನು ನಿರ್ಮಿಸುತ್ತಿದ್ದು, ಆಕಾಶ್ ಪರ್ವ ಸಂಗೀತ ನಿರ್ದೇಶಕರಾಗಿದ್ದಾರೆ.
ಚಿತ್ರವನ್ನು ಬರುವ ಆಗಸ್ಟ್ ತಿಂಗಳಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕ-ನಾಯಕಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.


