ಹೊಸಪೇಟೆ: ರಾಜ್ಯದ ಮುಂಚೂಣಿ ಪಟ್ಟಣ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾದ, ಇಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ (2025–26) ₹2,148.96 ಕೋಟಿ ವ್ಯವಹಾರ ನಡೆಸಿದ್ದು, ₹10.84 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳಿದರು.
ಬ್ಯಾಂಕ್ ಕಳೆದ 29 ವರ್ಷಗಳಿಂದ ಹಣಕಾಸು ವರ್ಷ ಪೂರ್ಣಗೊಂಡ ತಕ್ಷಣವೇ ಲೆಕ್ಕಪತ್ರವನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡುತ್ತಿದ್ದು, ಬುಧವಾರ ಸಹ ಅದೇ ಸಂಪ್ರದಾಯ ಮುಂದುವರಿಸಿ ಪತ್ರಿಕಾಗೋಷ್ಠಿ ಮೂಲಕ ಅಧ್ಯಕ್ಷರು ಈ ಮಾಹಿತಿ ನೀಡಿದರು.
ಠೇವಣಿ ಸಂಗ್ರಹ ₹1,365.36 ಕೋಟಿಗೆ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ (₹1,016) ಶೇ 34ರಷ್ಟು ಅಂದರೆ ₹349 ಕೋಟಿಯಷ್ಟು ಹೆಚ್ಚುವರಿ ಠೆವಣಿವಾಗಿದೆ. ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿನ ತಲ್ಲಣಗಳೇ ಠೇವಣಿ ಹೆಚ್ಚಳಕ್ಕೆ ಕಾರಣ. ಸಾಲ ವಿತರಣೆ ₹783.60 ಕೋಟಿಗೆ (ಶೇ 22.5ರಷ್ಟು ಹೆಚ್ಚಳ) ತಲುಪಿದೆ. ಎನ್ಪಿಎ ಪ್ರಮಾಣ ಶೇ 2.39ರಷ್ಟಿದೆ ಎಂದು ಅಧ್ಯಕ್ಷ ವಿಶ್ವನಾಥ ಹಿರೇಮಠ ತಿಳಿಸಿದರು.
ಹೆಚ್ಚಿನ ಪಟ್ಟಣ ಸಹಕಾರಿ ಬ್ಯಾಂಕ್ಗಳಲ್ಲಿ ಐಎಫ್ಎಸ್ಸಿ ಕೋಡ್ ಇಲ್ಲ, ಆದರೆ ವಿಕಾಸ ಬ್ಯಾಂಕ್ ಆ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ. ಜತೆಗೆ ಸೈಬರ್ ಸುರಕ್ಷತೆ, ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಮೂಲಸೌಕರ್ಯ ವೃದ್ಧಿಸುವ ಕೆಲಸ ಮಾಡಿದೆ ಎಂದರು.
ಶೆಡ್ಯೂಲ್ ಬ್ಯಾಂಕ್ ಸ್ಥಾನಮಾನ ಶೀಘ್ರ: ಕಳೆದ ವರ್ಷಾಂತ್ಯದಲ್ಲಿ ₹2,000 ಕೋಟಿ ವ್ಯವಹಾರದ ಮೈಲಿಗಲ್ಲನ್ನು ಬ್ಯಾಂಕ್ ದಾಟಿದೆ. ಶೆಡ್ಯೂಲ್ ಬ್ಯಾಂಕ್ ಆಗುವ ನಿಟ್ಟಿನಲ್ಲಿ ಬ್ಯಾಂಕ್ ಈಗಾಗಲೇ ಅರ್ಹತೆ ಗಳಿಸಿಕೊಂಡಿದ್ದು, ಆರ್ಬಿಐ ಮಾನದಂಡಗಳಂತೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿದ ತಕ್ಷಣ ಶೆಡ್ಯೂಲ್ ಬ್ಯಾಂಕ್ ಸ್ಥಾನಮಾನಕ್ಕೆ ಹಕ್ಕು ಮಂಡಿಸಬಹುದಾಗಿದೆ. ದೇಶದಲ್ಲಿ ಕೇವಲ 51 ಬ್ಯಾಂಕ್ಗಳಿಗೆ ಮಾತ್ರ ಈ ಸ್ಥಾನಮಾನ ಲಭಿಸಿದ್ದು, ರಾಜ್ಯದಲ್ಲಿ ಈ ಸಾಧನೆ ಮಾಡಿದ ಒಂದೂ ಬ್ಯಾಂಕ್ ಸದ್ಯ ಇಲ್ಲ ಎಂದರು.
ರಾಜ್ಯದಲ್ಲಿ ಬ್ಯಾಂಕ್ 18 ಶಾಖೆಗಳನ್ನು ಹೊಂದಿದೆ. ಕಳೆದ ಒಂದೇ ವರ್ಷ 10 ಶಾಖೆಗಳನ್ನು ಆರಂಭಿಸಲಾಗಿದೆ. ಒಟ್ಟು ಸಿಬ್ಭಂದಿಯ ಸಂಖ್ಯೆ 170ಕ್ಕೆ ಏರಿಕೆಯಾದರಿಂದ ಈ ಬಾರಿ ನಿವ್ವಳ ಲಾಭದಲ್ಲಿ ದೊಡ್ಡಮಟ್ಟಿನ ಹೆಚ್ಚಳ ಸಾಧ್ಯವಾಗಿಲ್ಲ. ನಗರದಲ್ಲಿ ಅತ್ಯಾಧುನಿಕ ನೂತನ ಪ್ರಧಾನ ಕಚೇರಿ ಸ್ಥಾಪಿಸಲಾಗಿದ್ದು, ಇದೂ ಬ್ಯಾಂಕ್ನ ಮೈಲಿಗಲ್ಲುಗಳಲ್ಲಿ ಒಂದಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಸಾಮಾಜಿಕ ಕಾಳಜಿ: ನಗರದ ಜೆ.ಪಿ.ನಗರದಲ್ಲಿ ಸಾರ್ವಜನಿಕ ಉದ್ಯಾನವನ್ನು ವಿಕಾಸ ಬಾಲವನವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅದು ಶೀಘ್ರ ಉದ್ಘಾಟನೆಗೊಳ್ಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿರುವ ಇಂದಿರಾ ಅವರನ್ನು ಅಧ್ಯಕ್ಷರು ಸನ್ಮಾನಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ನ ಸಲಹೆಗಾರರಾದ ವಿ.ಜೆ.ಕುಲಕರ್ಣಿ, ಚಂದಾ ಹುಸೇನ್, ನಿರ್ದೇಶಕರಾದ ಅನಂತ ಜೋಶಿ, ನವ್ಯಶ್ರೀ ಹಿರೇಮಠ, ರಾಘವೇಂದ್ರ, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಇದ್ದರು.


