ರಾಯಬಾಗ: ದೇಶದಾದ್ಯಂತ ನಡೆಯುತ್ತಿರುವ ಜನಗಣತಿಯು ಎರಡು ಹಂತಗಳಲ್ಲಿ ಮಾಡಲಾಗುತ್ತಿದ್ದು, ತರಬೇತಿ ಪಡೆಯುವ ಶಿಕ್ಷಕರು ಜನಗಣತಿ ಕಾರ್ಯ ಯಶಸ್ಸಿಗೊಳಿಸಬೇಕೆಂದು ಬಿಇಒ ಬಸವರಾಜಪ್ಪ ಆರ್ ಹೇಳಿದರು.
ಬುಧವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಜನಗಣತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ನಡೆಯುವ ಜನಗಣತಿಯ ತರಬೇತಿ ಪಡೆದ ಶಿಕ್ಷಕರು ಭಾಗವಹಿಸಿ, ಎಲ್ಲ ಮಾಹಿತಿಯನ್ನು ಸರಿಯಾಗಿ ಕಲೆ ಹಾಕಿ, ಯಾವದೇ ಮಾಹಿತಿ ಬಿಟ್ಟು ಹೋಗದಂತೆ ನೋಡಿಕೊಂಡು ಯಶಸ್ಸಿಯಾಗಿ ಕಾರ್ಯ ಪೂರೈಸಬೇಕು ತಿಳಿಸಿದರು.
ತಹಸೀಲ್ದಾರ ಮಹಾದೇವ ಸನಮುರಿ ಮಾತನಾಡಿ, ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ಮನೆಗಳ ಗಣತಿ, ಎರಡನೆಯ ಹಂತದಲ್ಲಿ ಜನ ಗಣತಿ ನಡೆಯಲಿದೆ. ಏ.1ರಿಂದ 15 ರವರೆಗೆ ನಡೆಯಲಿರುವ ಸ್ವಯಂ ಗಣತಿಯಲ್ಲಿ ಜನರೇ ಭಾಗವಹಿಸಿ ವೆಬ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನಂತರ ಗಣತಿದಾರರು ಮನೆ ಮನೆಗೆ ತೆರಳಿ ಗಣತಿ ಮಾಡಲಿದ್ದಾರೆ. ಏ.16 ರಿಂದ ಮೇ 15ರ ಅವಧಿಯಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆ ಉಪ ಪ್ರಾಚಾರ್ಯ ಬಿ.ಎಮ್.ಮಾಳಿ, ಎ.ಕೆ.ಬೊಂಗಳೆ, ಭೂಪಾಲ ಮಾನೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ತರಬೇತುದಾರರು ಇದ್ದರು.


