ಇಂಡಿ: ನಗರದ ಅಂಜುಮನ್ ಮರ್ಕಜ್ ಮಸೀದಿಯ ಇಮಾಮರಾಗಿ ಸೇವೆ ಸಲ್ಲಿಸುತ್ತಿರುವ ಹಾಫೀಜ ಫಿರೋಜ್ ಬಾಗವಾನ ಅವರು ಪವಿತ್ರ ಉಮ್ರಾ ಯಾತ್ರೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಪ್ರಮುಖರು ಹಾಗೂ ಅಂಜುಮನ್ ಮಸೀದಿ ಕಮಿಟಿಯ ವತಿಯಿಂದ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮವನ್ನು ಸಮಾಜ ಸೇವಕ ಹಸನ್ ಮುಜಾವರ್ ಅವರ ನೇತೃತ್ವದಲ್ಲಿ ಅಂಜುಮನ್ ಮಸೀದಿ ಕಮಿಟಿಯ ಪದಾಧಿಕಾರಿಗಳು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರು, ಉಮ್ರಾ ಯಾತ್ರೆ ಮುಸ್ಲಿಂ ಸಮುದಾಯದವರಿಗೆ ಅತ್ಯಂತ ಪವಿತ್ರವಾದ ಧಾರ್ಮಿಕ ಕರ್ತವ್ಯವಾಗಿದ್ದು, ಅಲ್ಲಾಹನ ಮನೆ ಕಾಬಾದಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ಒಂದು ಮಹತ್ತರ ಭಾಗ್ಯವಾಗಿದೆ ಎಂದು ಹೇಳಿದರು.
ಈ ವೇಳೆ ಹಾಫೀಜ ಫಿರೋಜ್ ಬಾಗವಾನ ಅವರು ಕಾಬಾ ಶರೀಫ್ನಲ್ಲಿ ದೇಶದ ಶಾಂತಿ, ಸಮಾಜದ ಏಕತೆ ಮತ್ತು ಎಲ್ಲರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಬೇಕೆಂದು ಸಮುದಾಯದವರು ಮನವಿ ಮಾಡಿದರು. ಅಲ್ಲದೆ, ಇಂಡಿ ನಗರದ ಜನತೆ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಕೂಡ ದುವಾ ಮಾಡುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಅಂಜುಮನ್ ಮಸೀದಿ ಕಮಿಟಿಯ ಉಪಾಧ್ಯಕ್ಷರಾದ ಮಮ್ಮದ್ ಫಾರೂಕ್ ತುರ್ಕಿ, ಕಾರ್ಯದರ್ಶಿ ರಫಿಕ್ ಇಂಡಿಕರ್, ಸದಸ್ಯರಾದ ಬಶೀರ್ ಇನಾಮದಾರ, ನೂರು ವಾಚ್ಮಿಕರ್, ಅಸ್ಲಾಂ ಪಟೇಲ್, ಮಮ್ಮದ್ ಯಾಸಿನ್ ತುರ್ಕಿ, ಹಸನ್ ಮುಜಾವರ್, ಜಬ್ಬಾರ್ ಸುಂಬಡ, ಮುಬಾರಕ್ ಕೊಲ್ಹಾರ, ಹುಸೇನ್ ಇನಾಮದಾರ, ಜಾವೇದ್ ಪಟೇಲ್, ಸಿದ್ದಿಕ್ ಹುಮನಾಬಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಹಾಫೀಜ ಫಿರೋಜ್ ಬಾಗವಾನ್ ಅವರ ಸುಖಕರ ಉಮ್ರಾ ಯಾತ್ರೆಗೆ ಎಲ್ಲರೂ ದುಆ ಮಾಡಿದರು.


