ಕೊಪ್ಪಳ ಮಾರ್ಚ್ 27,: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕಿನ್ನಾಳ ಕಲೆಯಂತಹ ವಿಷಯಗಳ ಕುರಿತು ಹೆಚ್ಚು ಹೆಚ್ಚು ತರಬೇತಿಗಳನ್ನು ನೀಡಬೇಕು. ಸ್ಥಳೀಯ ಕಲೆಗಳಿಂದ ಉದ್ಯಮ ಕಟ್ಟಿಕೊಳ್ಳುವ ಕುರಿತು ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಅವರು ಆರ್‌ಸೆಟಿ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರದಂದು ತಮ್ಮ ಕಛೇರಿಯಲ್ಲಿ ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ (ಆರ್‌ಸೆಟಿ) ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಂಸ್ಥೆಯಲ್ಲಿ ತರಬೇತಿಗಳನ್ನು ಪಡೆದ ಯುವಜನರಿಗೆ ಉದ್ಯೋಗ ಸೌಲಭ್ಯಗಳು ಸಿಗುವಂತಹ ವಾತಾವರಣವನ್ನು ನಿರ್ಮಿಸುವಂತೆ ಮತ್ತು ಫೋಟೋಗ್ರಫಿ ಬಗ್ಗೆ, ಕಿನ್ನಾಳ ಕಲೆ ಸೇರಿದಂತೆ ಜಿಲ್ಲೆಯ ಯುವಜನರ ಅವಶ್ಯಕತೆ ಹಾಗೂ ಸಾರ್ವಜನಿಕರ ಆಸಕ್ತಿಗೆ ಅನುಗುಣವಾಗಿ ತರಬೇತಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತರಬೇತಿಯನ್ನು ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್‌ಸೆಟಿ ತರಬೇತಿ ಕೇಂದ್ರದಲ್ಲಿ ವರ್ಷದ 365 ದಿನವೂ ತರಬೇತಿಗಳನ್ನು ನೀಡಬೇಕು ಎಂಬ ನಿಯಮವಿದೆ. ಅದರಂತೆ ಹೈನುಗಾರಿಕೆ, ಕೋಳಿ ಹಾಗೂ ಕುರಿ ಸಾಗಾಣಿಕೆ, ಜೇನು ಕೃಷಿ, ಅಣಬೆ ಕೃಷಿ, ಟೈಲರಿಂಗ್, ಉಪ್ಪಿನಕಾಯಿ ತಯಾರಿಕೆ, ಮೊಬೈಲ್ ರಿಪೇರಿ ಸೇರಿದಂತೆ ಜಿಲ್ಲೆಯ ಜನರ ಬೇಡಿಕೆ, ಆಸಕ್ತಿ ಏನು ಎಂಬುದನ್ನು ಅರಿತು ಅದಕ್ಕೆ ಅನುಗುಣವಾಗಿ ತರಬೇತಿ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕರಾದ ಮಾರುತಿ ಕೆ. ಹಾಗೂ ವಿರೇಶ್, ಸಿದ್ದಯ್ಯ, ಹರೀಶ್ ಸಾಲಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


