ರಂಗಭೂಮಿ  ನಿತ್ಯದ ಘಟನೆಗಳಿಗೆ ಕನ್ನಡಿ ಹಿಡಿವ ಮಾಧ್ಯಮ        – ಬಯಲಾಟದ ಉಷಾರಾಣಿ 

MK HasiruKranti
ರಂಗಭೂಮಿ  ನಿತ್ಯದ ಘಟನೆಗಳಿಗೆ ಕನ್ನಡಿ ಹಿಡಿವ ಮಾಧ್ಯಮ        – ಬಯಲಾಟದ ಉಷಾರಾಣಿ 
WhatsApp Group Join Now
Telegram Group Join Now
ಬಳ್ಳಾರಿ ಮಾ,28  ಸಮಾಜದಲ್ಲಿ  ನಿತ್ಯ ನಡೆಯುವ ಘಟನೆಗಳಿಗೆ ರಂಗಭೂಮಿ ಸಮರ್ಥವಾಗಿ ಕನ್ನಡಿ ಹಿಡಿಯುತ್ತಲೇ, ಹೊಸ ಆಲೋಚನೆಗೆ ಈಡು ಮಾಡುವ ಸಮರ್ಥ ಮಾಧ್ಯಮ ಎಂದು ಹಿರಿಯ ಕಲಾವಿದೆ ಬಯಲಾಟ ಉಷಾರಾಣಿ ಅಭಿಪ್ರಾಯಪಟ್ಟರು
      ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ಸಭಾಂಗಣದಲ್ಲಿ ನಾಟಕ ವಿಭಾಗದಿಂದ  ಆಯೋಜಿಸಿದ್ದ ‘ ವಿಶ್ವ ರಂಗಭೂಮಿ ದಿನಾಚರಣೆ ‘ ಹಾಗೂ ಶಿಕ್ಷಣದಲ್ಲಿ ರಂಗಭೂಮಿ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
     ರಂಗ ಚಟುವಟಿಕೆಗಳನ್ನು ಯುವ ಸಮುದಾಯ ಪ್ರೀತಿಯಿಂದ ಬೆಂಬಲಿಸಬೇಕು ಎಂದ ಅವರು ಬಯಲಾಟ ಕಲಾವಿದೆಯಾದ ತಮಗೆ ರಂಗಭೂಮಿಯ ಸೇವೆ ತೃಪ್ತಿಯನ್ನು ತಂದು ಕೊಟ್ಟಿರುವುದನ್ನು ಸ್ಮರಿಸಿ  ರಂಗಗೀತೆಗಳನ್ನು ಹಾಡಿದರು.
    ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಯುವ ರಂಗ ಸಂಶೋಧಕ ಜೆ. ದಿವಾಕರ ರಂಗಭೂಮಿಗೂ ಶಿಕ್ಷಣಕ್ಕೂ ಅವಿನಾಭಾವ ಸಂಬಂಧವಿದೆ. ರಂಗಭೂಮಿ ಅಕ್ಷರಸ್ಥರಿಗೂ ಮತ್ತು ಅನಕ್ಷರಸ್ಥರಿಗೂ ಏಕಕಾಲದಲ್ಲಿ ಅರಿವನ್ನು ಉಂಟುಮಾಡುವ ವಿಶಿಷ್ಟ ಮಾಧ್ಯಮವಾಗಿದೆ. ರಂಗಭೂಮಿಯಲ್ಲಿ ಆಂಗಿಕ ಮತ್ತು ವಾಚನ ಭಾಷೆಯಿದೆ.  ವಿದ್ಯಾರ್ಥಿಗಳು ಸಂವಹನ ಕಲೆಯನ್ನು ರಂಗಭೂಮಿಯ ಮೂಲಕ ಕರಗತ ಮಾಡಿಕೊಳ್ಳಬಹುದು  ಎಂದು ವಿಶ್ಲೇಷಿಸಿದರು.
   ಮೇಳ,ಹಾಡು, ಕುಣಿತ, ಸಂಭಾಷಣೆ ಎಲ್ಲವೂ ರಂಗಭೂಮಿಯಲ್ಲಿದೆ.ನಾವು ಕಳೆದು ಹೋಗದಂತೆ ಉಳಿಸಿ ಬೆಳೆಸುವ ಶಕ್ತಿ ಇದಕ್ಕಿದೆ. ಇಂತಹ ವಿಷಯವನ್ನು ಪಠ್ಯದಲ್ಲಿ ತರುವ ಕೆಲಸ ಜರೂರಾಗಬೇಕಿದೆ. ಏಕೆಂದರೆ ಪ್ರಾಥಮಿಕ ಶಿಕ್ಷಣದಲ್ಲಿ ನಮ್ಮ ಮಕ್ಕಳು ಮಾತನಾಡದ ಹಾಗೆ ಕಟ್ಟಿ ಹಾಕಲಾಗುತ್ತಿದೆ. ರಂಗ ಶಿಕ್ಷಣ ಇದ್ದರೆ ಪ್ರತಿ ಮಗು ಕ್ರಿಯಾಶೀಲವಾಗಿ ಓಡಾಡಿ ಮಾತನಾಡುತ್ತೆ ಎಂದರು.
     ರಂಗಭೂಮಿ ಪ್ರಧಾನವಾಗಿ ತೊಡಗಿಸಿಕೊಳ್ಳುವಿಕೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಕಲೆ ಹಾಗೂ ಸಹಭಾಗಿತ್ವವನ್ನು ಕಲಿಸಿಕೊಡುತ್ತದೆ ಎಂದು ವಿವರಿಸಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ನಾಟಕ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ  ಹೊಸ ಬದಲಾವಣೆಗೆ ಸದಾ ತೆರೆದುಕೊಳ್ಳುತ್ತ ಬಂದಿರುವ ಆಧುನಿಕ ಕನ್ನಡ ರಂಗಭೂಮಿಗೆ ದೊಡ್ಡ ಪರಂಪರೆ ಇದೆ. ನವಮಾಧ್ಯಮಗಳ ಕಾಲಘಟ್ಟದಲ್ಲಿ ಅದೀಗ ಅನೇಕ ಬಗೆಯ ಸವಾಲುಗಳನ್ನು ಎದುರಿಸುತ್ತಿದೆ. ಸದಾ ತಾತ್ವಿಕತೆಯನ್ನು ದಾಟಿಸುತ್ತಲೇ ನಮ್ಮನ್ನು   ಮನುಷ್ಯರನ್ನಾಗಿಸುವ ಈ ಮಾಧ್ಯಮವನ್ನು ಪ್ರಜ್ಞಾವಂತ ಪ್ರೇಕ್ಷಕರು ಉಳಿಸಿಕೊಳ್ಳಬೇಕಾಗಿದೆ ಎಂದರು.
       ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಮಾತನಾಡಿ ಜನಸಾಮಾನ್ಯರ ನಡುವೆ ಹುಟ್ಟಿ ಬೆಳೆದ ರಂಗಭೂಮಿಯ ಅಪಾರ ಸಾಧ್ಯತೆಗಳನ್ನು ಅರಿಯಲು, ಕಲಾವಿದರ ಸೇವೆಯನ್ನು ನೆನಪಿಸಿಕೊಳ್ಳಲು, ರಂಗಭೂಮಿಯನ್ನು ಬಲಪಡಿಸಲು ಇಂತಹ ದಿನಾಚರಣೆಗಳು ಸಹಕಾರಿಯಾಗುತ್ತವೆ ಎಂದರು
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹುಚ್ಚೂಸಾಬ್ ಸಂಡೂರು  ಸಮಾಜದಲ್ಲಿರುವ ನ್ಯೂನತೆಗಳನ್ನು ಸರಿಪಡಿಸುತ್ತ, ಸಮಸ್ಯೆಗಳ ಬಗೆಗೆ ಹೊಸ ಪ್ರಜ್ಞೆಯನ್ನು ಹುಟ್ಟು ಹಾಕುವ ರಂಗಭೂಮಿಗೆ ಎಂದಿಗೂ ಸಾವಿಲ್ಲ. ಕಾಲಕ್ಕೆ ತಕ್ಕ ಹಾಗೆ ಅನೇಕ ಪಲ್ಲಟಗಳನ್ನು ಹೊಂದಿ ಬೆಳೆಯುತ್ತಿದೆ ಎನ್ನುವುದಕ್ಕೆ ದೇಶದ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳೇ ಜೀವಂತ ಸಾಕ್ಷಿ ಎಂದರು.
       ವೇದಿಕೆ ಮೇಲೆ ನಾಟಕ ಅತಿಥಿ ಉಪನ್ಯಾಸಕ ಆರ್.ಪಿ. ಮಂಜುನಾಥ ಇದ್ದರು.ಈ ಸಂದರ್ಭದಲ್ಲಿ  ಉಪನ್ಯಾಸಕ ಹನುಮಂತರಾಯ ಹಾಗೂ ವಿದ್ಯಾರ್ಥಿಗಳು   ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article