ಅಥಣಿ: ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ. ಆರ್ ಅಂಬೇಡ್ಕರ ಅವರ ಜಯಂತಿಯನ್ನು ಏಪ್ರಿಲ್ 14 ರಂದು ತಾಲೂಕು ಆಡಳಿತದಿಂದ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು. ಈ ಕಾರ್ಯಕ್ರಮದಲ್ಲಿ ಗಣ್ಯ ಮಾನ್ಯರು ಸಾರ್ವಜನಿಕರು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಹಶೀಲ್ದಾರ ಸಿದ್ರಾಯ ಭೋಸಗಿ ಹೇಳಿದರು.
ಅವರು ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿ ಕಾರ್ಯಕ್ರಮದ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಜಯಿಂತಿ ಕಾರ್ಯಕ್ರಮದಲ್ಲಿ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರ ಇರಬೇಕು. ಗೈರಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ಬ್ರೀಗೆಡ್ ತಾಲೂಕಾ ಅಧ್ಯಕ್ಷ ಮಹಾಂತೇಶ ಬಾಡಗಿ ಪ್ರತಿ ವರ್ಷದಂತೆ ಈ ವರ್ಷವೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಅದ್ದೂರಿಯಾಗಿ ಆಚರಿಸಬೇಕು. ಕಳೆದ ಬಾರಿ ಈ ಕಾರ್ಯಕ್ರಮದಲ್ಲಿ ತಾಲೂಕಾ ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಆದರೆ ಈ ಬಾರಿ ಹಾಗಾಗಬಾರದು ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಕಡ್ಡಾಯವಾಗಿ ಭಾಗವಹಿಸಿ ಜಯಂತಿಗೆ ಮೆರಗು ತರಬೇಕು. ಈ ಕಾರ್ಯಕ್ರಮದಲ್ಲಿ ಗೈರಾಗುವ ತಾಲೂಕಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.
ಈ ವೇಳೆ ನ್ಯಾಯವಾದಿ ಶಶಿಕಾಂತ ಬಾಡಗಿ ಮಾತನಾಡಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ವಿಶ್ವ ಮಾನ್ಯರು ಅವರ ಜಯಂತಿ ಆಚರಣೆಯು ಕೆಲವೇ ಜನಾಂಗದವರಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು. ಅವರು ಕೊಟ್ಟ ಸಂವಿಧಾನದಿಂದಲೇ ನಾವೆಲ್ಲರೂ ಸಮಾನತೆಯಿಂದ ಬದುಕು ಸಾಗಿಸುತ್ತಿದ್ದೇವೆ. ಅಂತಹ ಮಹಾನ್ ಚೇತನರ ಜಯಂತಿಯನ್ನು ಎಲ್ಲರೂ ಸೇರಿ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸೋಣ ಎಂದರು.
ಸಮಾಜ ಕಲ್ಯಾಣ ಅಧಿಕಾರಿ ಪರಸರಾಮ ಪತ್ತಾರ ಮಾತನಾಡಿ ದೇಶಕ್ಕೆ ತಮ್ಮದೆಯಾದ ಮಹತ್ವದ ಕೊಡುಗೆ ನೀಡಿದ ಮಹನೀಯರ ಜಯಂತಿ ವಿಜೃಂಭಣೆಯಿಂದ ಆಚರಿಸೋಣ. ಇದಕ್ಕೆ ಅಧಿಕಾರಿಗಳು, ಸಮಾಜದ ಮುಖಂಡರ ಸಾರ್ವಜನಿಕರ ಸಹಕಾರ ಅವಶ್ಯವಿದೆ ಎಂದ ಅವರು ತಾಲೂಕಾ ಮಟ್ಟದ ಅಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಕಲ ಸಿದ್ಧತೆ ಮಾಡಲಾಗುವುದು ಎಂದರು.
ಈ ವೇಳೆ ಮುಖಂಡರಾದ ಶಶಿ ಸಾಳವೆ. ನ್ಯಾಯವಾದಿ ಮಿತೇಶ ಪಟ್ಟಣ, ರಾಮ ಮರಳೇರ, ಮಂಜು ನೂಲಿ, ಸುಕುಮಾರ ಕಾಂಬಳೆ ಮಾತನಾಡಿದರು.
ಈ ವೇಳೆ ಮುಖಂಡರಾದ ಗೌತಮ್ ಪರಾಂಜಪೆ, ಮಂಜು ಹೊಳಿಕಟ್ಟಿ, ಮಂಜು ನೂಲಿ, ಶಿವಾನಂದ ಸೌದಾಗರ, ವಿನಾಯಕ ಕಾಂಬಳೆ, ನಿಶಾಂತ್ ಮಡ್ಡಿ, ಅಭಿಷೇಕ್ ಬೆಳ್ಳಂಕ್ಕಿ, ಪರಸರಾಮ ಕಾಂಬಳೆ, ಕಪೀಲ್ ಘಟಕಾಂಬಳೆ, ಪುರಸಭ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಚ್ಚಿ, ಅಧಿಕಾರಿಗಳಾದ ತಾಲೂಕು ವೈದ್ಯಾಧಿಕಾರಿ ಬಸಗೌಡಾ ಕಾಗೆ, ಶಿವಾನಂದ ಕಲ್ಲಾಪೂರ, ಪುನೀತ್ ಪಾಸೋಡಿ, ಅಪರಾಧ ವಿಭಾಗ ಪಿಎಸ್ಐ ಮಲ್ಲಿಕಾರ್ಜುನ ತಳವಾರ, ಸಿಡಿಪಿಓ ಮಂಜುನಾಥ ಸೌದಲಗೀಕರ್, ನಿಂಗಣ್ಣಗೌಡ ಬಿರಾದಾರ, ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಘಟಕ ವ್ಯವಸ್ಥಾಪಕ ಎನ್. ಎಂ ಕೇರಿ. ಸಮಾಜ ಕಲ್ಯಾಣ ಇಲಾಖೆಯ ಓಗೇಪ್ಪಾ ಅರಟಾಳ, ಸದಾಶಿವ ಮಾಂಗ, ಚಂದ್ರಕಾಂತ ಕಾಂಬಳೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


