ಧಾರವಾಡಸಮಾಜದಲ್ಲಿ ಹಲವಾರು ವೇದಿಕೆಗಳು ಹೊಸ ಪ್ರತಿಭೆಗಳ ಆಗಮನಕ್ಕಾಗಿ ಕಾದು ಕುಳಿತಿವೆ. ಆ ವೇದಿಕೆ ನಿಮ್ಮದು ಆಗಬಹುದು, ನಿಮ್ಮ ಸರಿಯಾದ ಕೌಶಲ್ಯದೊಂದಿಗೆ ನಿಮ್ಮ ಪ್ರತಿಭೆ ಅನಾವರಣಗೊಳಿಸಿ. ಸ್ಫರ್ಧೆಗಳಲ್ಲಿ ಗೆಲುವು ಮುಖ್ಯವಲ್ಲ. ಅದರಿಂದ ಕಲಿಯುವುದು ಮುಖ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹೇಳಿದರು.
ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಂಕಲ್ಪ-೨೦೨೬ ಪ್ರತಿಭಾನ್ವೇಶ್ವಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಅವರದೇ ಆದ ಮೌಲ್ಯಗಳಿರುತ್ತವೆ. ಅವರ ಆಚಾರ ವಿಚಾರಗಳನ್ನು ಎಲ್ಲರೂ ಗೌರವ ನೀಡುವದನ್ನು ಕಲಿಬೇಕು. ಇದರಿಂದ ಆರೊಗ್ಯಕರ ಹಾಗೂ ಅನುಕೂಲಕರವಾದ ವಾತಾವರಣ ಬೆಳೆಯಲು ಸಾಧ್ಯ. ಇಂತಹ ಕಾಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮತ್ತು ಧೈರ್ಯ ತುಂಬುತ್ತವೆ. ಅವರಲ್ಲಿ ಯಾವುದೇ ಗುರಿಯನ್ನು ತಲುಪಲು ಇವುಗಳು ಮಾರ್ಗದರ್ಶಕವಾಗಿರುತ್ತದೆ ಎಂದರು.
ವರ್ಷದಿಂದ ವರ್ಷಕ್ಕೆ ನಿಮ್ಮ ಪ್ರತಿಭಾ ಕೌಶಲ್ಯ ಬೆಳೆಯುತ್ತ ಸಾಗಬೇಕು. ಇದು ನಿಮ್ಮ ಜನಪ್ರೀಯತೆಯನ್ನು ಹೆಚ್ಚಿಸುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವದರಿಂದ ಅನೇಕ ವಿಷಯಗಳನ್ನು ಅರಿತುಕೊಳ್ಳುವದಲ್ಲದೇ, ವಿದ್ಯಾರ್ಥಿಗಳಲ್ಲಿ ಪರಸ್ಪರ ಸ್ನೇಹ, ಸೌಹಾರ್ದತೆ ಬೆಳೆಸಿಕೊಳ್ಳಬಹುದು ಎಂದರು.
ಖ್ಯಾತ ಚಲನಚಿತ್ರ ಗಾಯಕ, ಕಲಾವಿದ ನವೀನ ಸಜ್ಜು ಮಾತನಾಡಿ, ಜೀವನ ಅತಿ ಅಲ್ಪವಾಗಿದೆ. ಇರುವಷ್ಟು ದಿನ ಪರರಿಗೆ ಸಹಾಯ ಮತ್ತು ಮಾನವೀಯತೆಯಿಂದ ನಡೆದುಕೊಳ್ಳಬೇಕು. ಹಣಕ್ಕಿಂತ ಜೀವನಕ್ಕೆ ನಮ್ಮದಿ ಮುಖ್ಯ. ಪಾಲಕರು ಮತ್ತು ಶಿಕ್ಷಕರನ್ನು ಗೌರವಿಸಬೇಕು. ಜೀವನದಲ್ಲಿ ನೆಮ್ಮದಿ ಬೆಳೆಸಿಕೊಂಡು ಜೀವನ ಸುಂದರವಾಗಿ ರೂಪಿಸಿಕೊಳ್ಳಬೇಕು. ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಶಾಶ್ವತ ಎಂದರು.
ಜೆ.ಎಸ್.ಎಸ್ ನಲ್ಲಿ ನೈತಿಕ ಶಿಕ್ಷಣ ದೊರೆಯಲು ಡಾ. ಅಜಿತ ಪ್ರಸಾದರವರ ೫೫ ವರ್ಷಗಳ ಪರಿಶ್ರಮ ದೊಡ್ಡದು. ಇದನ್ನು ಜೆ.ಎಸ್.ಎಸ್ ಸಮೂಹ ಸಂಸ್ಥೆಯ ಗೊಡೆಗಳಲ್ಲಿ ಪ್ರತಿದಧ್ವನಿಸುತ್ತಿದೆ. ಅವರ ಉತ್ಸಾಹ, ಕಾರ್ಯದಕ್ಷತೆ ಶಿಸ್ತನ್ನು ಕೊಂಡಾಡಿದರು. ಗುರಿಯನ್ನು ತಲುಪಲು ಪ್ರಯತ್ನ, ಶ್ರಮ, ಧೈರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ನಂತರ ತಮ್ಮ ಸುಮಧುರವಾದ ಕಂಠದಿಂದ ಗಾಯನದ ಮುಖಾಂತರ ಎಲ್ಲರನ್ನೂ ರಂಜಿಸಿದರು.
ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಧಾರವಾಡ ನಗರ ಸಂಗೀತ, ಸಂಸ್ಕೃತಿ, ಸಾಹಿತ್ಯದ ತವರೂರು. ಇದರ ಪರಿಚಯವನ್ನು ಮಾಡಿಸುವ ಪ್ರಯತ್ನ ಸಂಕಲ್ಪ-೨೦೨೬ ಕೇವಲ ಪಾಠ ಪ್ರವಚನಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ಅಂಕಗಳೊಂದಿಗೆ ಕೌಶಲ್ಯವು ಅವಶ್ಯ. ಆಗ ಮಾತ್ರ ವಿದ್ಯಾರ್ಥಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಗುಣಮಟ್ಟದ ಮೌಲ್ಯಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕು. ಇದರಿಂದ ಮುಂದೆ ನೀವು ಸುಂದರವಾದ ಬದುಕನ್ನು ಕಟ್ಟಬಹುದು. ವಿದ್ಯಾರ್ಥಿಗಳೇ ನಿಮ್ಮ ಪ್ರತಿಭೆ ಹೊರಹಾಕಲು ಹಿಂಜರಿಕೆ ಬೇಡ, ಧೈರ್ಯವಂತರಾಗಿ, ಸಾಹಸಿಗಳಾಗಿ, ಸತ್ಯ, ನಿಷ್ಠೆಯಿಂದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಜಯಶಾಲಿಗಳಾಗಿ. ವಿದ್ಯಾರ್ಥಿಗಳ ಸೂಕ್ತ ನಿರ್ಧಾರ, ಪಾಲಕರ ಸಹಕಾರ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳ ಮಾರ್ಗದರ್ಶನ ಮತ್ತು ಪರಿಶ್ರಮದಿಂದ ನಮ್ಮಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಯಶಸ್ವಿಯಾಗುತ್ತವೆ. ಸಂಕಲ್ಪ-೨೦೨೬ ಸಹ ಯಶಸ್ವಿಯಾಗಲಿದೆ ಎಂದರು.
ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪಪ್ರಾಚಾರ್ಯ ಡಾ. ಸೂರಜ್ ಜೈನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದರ್ಶನ ಗೋಕರ್ ಪರಿಚಯಿಸಿದರು. ರಶ್ಮೀ ಎಸ್.ಹೆಚ್ ವಂದಿಸಿದರು. ರವೀನಾ ಮತ್ತು ರಶ್ಮೀ ಎನ್.ಎಮ್ ನಿರೂಪಿಸಿದರು. ಡಾ. ವೆಂಕಟೇಶ್ ಮುತಾಲಿಕ್, ಡಾ. ಆರ್.ವಿ. ಚಿಟಗುಪ್ಪಿ, ವಿವೇಕ ಲಕ್ಷ್ಮೇಶ್ವರ, ಡಾ. ಜಿನ್ನಪ್ಪ ಕುಂದಗೋಳ, ಡಾ. ರೋನಿಲ್ ಮನೋಹರ, ಶೃತಿ ಶೆಟ್ಟಿ, ಶ್ರವಣಕುಮಾರ ಯೋಗಿ ಉಪಸ್ಥಿತರಿದ್ದರು.


