ಗ್ರಾಹಕರು ಉತ್ಪನ್ನದ ವಿವರಗಳನ್ನು ಪರಿಶೀಲಿಸಿ, ಸರಿಯಾದ ಉತ್ಪನ್ನ ಖರೀದಿಸಬೇಕು: ನ್ಯಾ.ಮಹಾಂತೇಶ ದರಗದ್

Pratibha Boi
ಗ್ರಾಹಕರು ಉತ್ಪನ್ನದ ವಿವರಗಳನ್ನು ಪರಿಶೀಲಿಸಿ, ಸರಿಯಾದ ಉತ್ಪನ್ನ ಖರೀದಿಸಬೇಕು: ನ್ಯಾ.ಮಹಾಂತೇಶ ದರಗದ್
WhatsApp Group Join Now
Telegram Group Join Now
ಕೊಪ್ಪಳ ಮಾರ್ಚ್ 26, (ಕರ್ನಾಟಕ ವಾರ್ತೆ): ಗ್ರಾಹಕರು ಖರೀದಿಸುವ ಪ್ರತಿಯೊಂದು ಉತ್ಪನ್ನದ ಮೇಲೆ ಇರುವ ತಯಾರಿಕಾ ದಿನಾಂಕ, ಉತ್ಪನ್ನದ ಬಳಕೆಯ ಅವಧಿ ಹಾಗೂ ಗುಣಮಟ್ಟದ ಗುರುತು ಸೇರಿದಂತೆ ಉತ್ಪನ್ನದಲ್ಲಿ ಬಳಸಲಾದ ಪದಾರ್ಥಗಳನ್ನು ಪರಿಶೀಲಿಸಿ, ಸರಿಯಾದ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ್ ಅವರು ಹೇಳಿದರು.
ಅವರು ಗುರುವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತç ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ವಿಶ್ವ ಗ್ರಾಹಕರ ದಿನಾಚರಣೆ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರು ಖರೀದಿ ಮಾಡುವ ಪ್ರತಿಯೊಂದು ಉತ್ಪನ್ನವೂ ಗುಣಮಟ್ಟದಿಂದ ಕೂಡಿರುವ ಬಗ್ಗೆ ಹಾಗೂ ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಯಾವುದೇ ಮೋಸ, ತಪ್ಪು ತೂಕ, ಅವಧಿ ಮೀರಿದ ವಸ್ತುಗಳ ವಿರುದ್ಧ ತಕ್ಷಣ ದೂರು ನೀಡುವ ಜಾಗೃತಿ ಬೆಳೆಸಿಕೊಳ್ಳಬೇಕು. ಎಂಆರ್‌ಪಿ ಗಿಂತ ಹೆಚ್ಚಾಗಿ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಹಕರು ಮುಂದೆ ಬರಬೇಕು. ಜೊತೆಗೆ ಪ್ರಜ್ಞಾವಂತರಾದ ವಿದ್ಯಾರ್ಥಿಗಳು ಮತ್ತು ಇಂದಿನ ಯುವಕರು ತಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಅಂದಾಗ ಮಾತ್ರ ದೇಶ ಬದಲಾವಣೆ ಕಾಣಲು ಸಾಧ್ಯ. ಭಾರತದಲ್ಲಿ “ಗ್ರಾಹಕ ಸಂರಕ್ಷಣಾ ಕಾಯ್ದೆ 2019” ಜಾರಿಗೆ ಬಂದಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ರಕ್ಷಣೆಯಿದೆ. ಮೋಸ, ತಪ್ಪು ಜಾಹೀರಾತು ಹಾಗೂ ಕಳಪೆ ಉತ್ಪನ್ನಗಳ ವಿರುದ್ಧ ದೂರು ಸಲ್ಲಿಸಿ ನ್ಯಾಯ ಪಡೆಯಲು ಈ ಕಾಯ್ದೆ ಸಹಕಾರಿಯಾಗಿದೆ ಎಂದು ಹೇಳಿದರು.
ಕೊಪ್ಪಳದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಅವರು ಮಾತನಾಡಿ, ಮಾರುಕಟ್ಟೆಯಲ್ಲಿ ದೊರೆಯುವ ಪ್ರತಿಯೊಂದು ಉತ್ಪನ್ನವೂ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರಬೇಕು. ಗ್ರಾಹಕರು ತಾವು ಬಳಸುವ ವಸ್ತುಗಳ ಬಗ್ಗೆ ಭಯಮುಕ್ತರಾದಾಗ ಮಾತ್ರ ಸದೃಢ ಆರ್ಥಿಕತೆ ನಿರ್ಮಾಣವಾಗಲು ಸಾಧ್ಯ. ಸುರಕ್ಷಿತ ಉತ್ಪನ್ನಗಳು, ಆತ್ಮವಿಶ್ವಾಸದ ಗ್ರಾಹಕರು ಎಂಬ ಘೋಷವಾಕ್ಯ ಕುರಿತು ಮತ್ತು ಕಾನೂನಿನ ಕುರಿತು ಅರಿವು ಮೂಡಿಸಿದರು.
ಕೊಪ್ಪಳದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯರಾದ ರಾಜು ಎನ್. ಮೇತ್ರಿ ಅವರು ಮಾತನಾಡಿ, ಖರೀದಿಸುವ ಪ್ರತಿ ವಸ್ತುಗಳಲ್ಲಿ ಸಿದ್ದಪಡಿಸಿದ ದಿನಾಂಕ ಮತ್ತು ಎಷ್ಟು ದಿನಗಳ ಕಾಲ ಬಳಸಬಹುದು ಎಂಬುದನ್ನು ಗ್ರಾಹಕರು ತಿಳಿದಿರಬೇಕು. ಮಾರಾಟ ಮಾಡುವವರು ವಸ್ತುಗಳ ನಿಖರ ಮಾಹಿತಿ ನೀಡಬೇಕು. ಲಾಭದ ಆಸೆಗೆ ಮನಬಂದಂತೆ ವ್ಯಾಪಾರ ಮಾಡಬಾರದು. ಅಂತಹ ಅನ್ಯಾಯ ನಿಮ್ಮ ಕಣ್ಣಮುಂದೆ ಕಂಡುಬಂದರೆ ಅದರ ವಿರುದ್ಧ ಪ್ರಶ್ನೆ ಮಾಡಬೇಕು ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕೊಪ್ಪಳ ನ್ಯಾಯವಾದಿಗಳಾದ ಸಾವಿತ್ರಿ ಮುಜುಮದಾರ ಅವರು ಮಾತನಾಡಿ, ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಕುರಿತು ಮತ್ತು ನಕಲಿ ಮತ್ತು ಅಪಾಯಕಾರಿ ಉತ್ಪನ್ನಗಳು, ಡಿಜಟಲ್ ಮೋಸ, ಕಾನೂನುಗಳ ಕೊರತೆ, ಗ್ರಾಮೀಣ ಭಾರತದ ಸವಾಲುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರಾದ ವಿಶ್ವನಾಥಗೌಡ ಎಂ.ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಕೊಪ್ಪಳದ ಭಾರತರತ್ನ ಶ್ರೀ ಆಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಉಷಾದೇವಿ ಎಸ್. ಹಿರೇಮಠ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ರವಿಕುಮಾರ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಸಿಬ್ಬಂದಿಗಳ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article