ಬೆಂಗಳೂರು: ಮಾ 26, ಸಾರ್ವಜನಿಕ ರಸ್ತೆ ಮತ್ತು ಜನವಸತಿ ಪ್ರದೇಶ, ಶಾಲಾ ಕಾಲೇಜು, ಆಸ್ಪತ್ರೆ, ಬಳಿ ಸೇರಿದಂತೆ ರಸ್ತೆಗಳಲ್ಲಿ ದೋಷಪೂರಿತ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ವಾಹನ ಚಲಾಯಿಸಿ ಶಬ್ದ ಮತ್ತು ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವವರ ಹಾಗೂ ಕಾನೂನು ಬಾಹಿರವಾಗಿ ಅಳವಡಿಸುವರರ ವಿರುದ್ಧ ಕ್ರಮ ಜರುಗಿಸಲು ನಿರಂತರ ಕಾರ್ಯಾಚರಣೆ ಕೈಗೊಳ್ಳುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿಪಿ ರವರಿಗೆ ಪತ್ರ ಬರೆದ ನಿಮಿತ್ಯ ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಕಾರ್ಯಾಚರಣೆ ಕೈಗೊಂಡು ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಪ್ರಧಾನ ಕಚೇರಿಯಿಂದ ಪತ್ರ ಹೊರಡಿಸಿದೆ!
ರಾಜ್ಯದಲ್ಲಿ ವಿಪರೀತವಾಗಿ ಕೆಲವರು ತಮ್ಮ ದ್ವಿಚಕ್ರ ಮತ್ತು 4 ಚಕ್ರದ ವಾಹನಗಳನ್ನು ಮಾರ್ಪಾಡಿಸಿ ನಿರ್ಬಂದಿತ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಚಲಾಯಿಸಿ ಕರ್ಕಶ ಶಬ್ದ, ಹೆಚ್ಚು ಹೊಗೆ ಸೋರಿಸುವ ಮೂಲಕ ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಉಂಟು ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಯುವಕರು ರಾಜ್ಯ ಮತ್ತು ರಾಷ್ಟ್ರೀಯ, ಹೆದ್ದಾರಿಗಳಲ್ಲಿ ನಗರದ ಮುಖ್ಯರಸ್ತೆಗಳಲ್ಲಿ ಮಾರ್ಪಾಡಿಸಿದ ದೋಷಪೂರಿತ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ತಮ್ಮನ್ನು ಗುರುತಿಸುವಂತೆ ಅತಿವೇಗವಾಗಿ ಚಲಾಯಿಸುವ ಮೂಲಕ ಬೃಹತ್ ಮಟ್ಟದ ಶಬ್ದಮಾಲಿನ್ಯ ಮಾಡುತ್ತಿದ್ದು ವಾಹನ ಸುಮಾರು 2 ಕಿಮೀನಷ್ಟು ಉದ್ದ ಸಾಗಿದ್ದರೂ ಸಹ ಶಬ್ದವು ಕಿವಿಗೆ ಹಾನಿಯುಂಟು ಮಾಡುವಷ್ಟಿರುತ್ತದೆ, ಪ್ರಸ್ತುತ ಈ ದುಷ್ಕೃತ್ಯಗಳು ಜನವಸತಿ ಪ್ರದೇಶ, ಶಾಲಾ ಕಾಲೇಜ್, ಆಸ್ಪತ್ರೆ, ನ್ಯಾಯಾಲಯ ಸೇರಿದಂತೆ ಗಲ್ಲಿಗಲ್ಲಿಗಳಲ್ಲಿಯೂ ವ್ಯಾಪಿಸಿದೆ. ನಿರ್ಬದಿಂತ/ನಿಷೇಧಿತ ಸೈಲೆನ್ಸರ್‌ಗಳ ಬಳಕೆಯಿಂದ ಚಲಾಯಿಸುವ ವಾಹನಗಳ ಕರ್ಕಶ ಶಬ್ದಗಳಿಂದ ನವಜಾತ ಶಿಶುಗಳಿಗೆ ಕಿವಿ ಮಂದಾಗುವದು, ಕಿವುಡುತನ ಉಂಟಾಗುವುದು, ಹೃದಯ ಬಡಿತ ಹೆಚ್ಚಾಗುತ್ತಿದ್ದು ಮಾನಸಿಕ ಅಸ್ವಸ್ಥೆಗೆ ಕಾರಣವಾಗುತ್ತಿರುತ್ತದೆ. ಗರ್ಭಿಣಿ ಮಹಿಳೆಯರಿಗೆ, ವಯೋವೃದ್ಧರಿಗೆ ಅಧಿಕ ರಕ್ತದೊತ್ತಡ, ಹೃದಯ ಖಾಯಿಲೆಯುಳ್ಳ ವ್ಯಕ್ತಿಗಳಿಗೆ ಮಾರಕವಾಗಿ ಪರಿಣಮಿಸಿದೆ. ನ್ಯಾಯಾಲಯ, ಸರ್ಕಾರಿ ಕಛೇರಿಗಳ ಕಾರ್ಯಕಲಾಪಕ್ಕೆ ಹಾಗೂ ಆಸ್ಪತ್ರೆಯಲ್ಲಿನ ರೋಗಿಗಳಿಗೆ, ಶಾಲಾ ಕಾಲೇಜ್ ಗಳಲ್ಲಿ ಪಾಠ ಕೇಳುವ ವಿಧ್ಯಾರ್ಥಿಗಳಿಗೆ, ಪೂಜಾ ಮಂದಿರಗಳಿಗೆ ಸಮಸ್ಯೆ ಉಂಟು ಮಾಡುತ್ತಿದ್ದು ಕಾನೂನಿನ ಭಯವಿಲ್ಲದೇ ಪುಂಡಾಟಗಳು ವ್ಯಾಪಕವಾಗಿವೆ. ಈ ನಡುವೆ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಜನವಸತಿ ಪ್ರದೇಶಗಳಲ್ಲಿ ದೋಷಪೂರಿತ ಸೈಲೆನ್ಸರ್ ಮತ್ತು ಕರ್ಕಶ ಶಬ್ದದ ಹಾರ್ನ್ ಬಳಕೆ ಹೆಚ್ಚಾಗುವುದರಿಂದ ತೊಂದರೆಗೊಳಗಾಗಿ ಪ್ರಶ್ನಿಸುವವರ ಮೇಲೆ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳ ನಿಂದನೆ ಮಾಡುವ ಘಟನೆಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿವೆ, ಹಾಗೂ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೋಷಪೂರಿತ ಸೈಲೆನ್ಸರ್ ಕರ್ಕಶ ಶಬ್ದದ ಹಾರ್ನ್‌ಗಳನ್ನು ಅಳವಡಿಸುವ ಶಾಪ್ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದಿದ್ದರೂ ಹಾಗೂ ಇಂತಹ ಪುಂಡಾಟಗಳು ಕಣ್ಣೆದರು ಕಂಡರೂ ಕಾನೂನು ಕ್ರಮ ಕೈಗೊಳ್ಳಲು ಕರ್ತವ್ಯನಿರತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ನಿರ್ಲಕ್ಷಿಸುತ್ತಿರುವುದಾಗಿ ಸಾರ್ವಜನಿಕರು ಟೀಕೆ ಮಾಡುತ್ತಿದ್ದರಿಂದ ಗಂಭೀರವಾಗಿ ಪರಿಗಣಿಸಿ ರಾಜ್ಯದ ಸಾರ್ವಜನಿಕ ರಸ್ತೆ ಮತ್ತು ಪ್ರಮುಖವಾಗಿ ಜನವಸತಿ ಪ್ರದೇಶ, ಶಾಲಾ ಕಾಲೇಜ್, ಆಸ್ಪತ್ರೆಗಳ ಬಳಿ ಸೇರಿದಂತೆ ನಾನಾ ಸಾರ್ವಜನಿಕ ರಸ್ತೆಗಳಲ್ಲಿ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ವಾಹನ ಚಲಾಯಿಸುವ ಕರ್ಕಶ ಶಬ್ದ ಉಂಟು ಮಾಡಿ ಸಾರ್ವಜನಿಕರಿಗೆ, ಖಾಯಿಲೆಯುಳ್ಳವರಿಗೆ ಮಾರಕವಾಗಿ ಪರಿಣಮಿಸಿ ಶಬ್ದಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳನ್ನು ವಶಪಡಿಸಿಕೊಂಡು ಭಾರತೀಯ ಮೋಟಾರ್ ವಾಹನ ಕಾಯ್ದೆ-1988, ಸೆಕ್ಷನ್-52, 53 ಮತ್ತು ಸೆಕ್ಷನ್-182ಎ ರಡಿಯಲ್ಲಿ ಹಾಗೂ ವಿವಿಧ ನಿಯಮಗಳಡಿ ಪ್ರಕರಣ ದಾಖಲಿಸಿ ಮತ್ತು ದೋಷಪೂರಿತ ಸೈಲೆನ್ಸರ್ ಮತ್ತು ಕರ್ಕಶ ಹಾರ್ನ್‌ಗಳನ್ನು ಕಾನೂನು ಬಾಹಿರವಾಗಿ ಅಳವಡಿಸುವ ಅಂಗಡಿಗಳ ಮಾಲೀಕರ ವಿರುದ್ದ ಅಗತ್ಯ ಕ್ರಮ ಜರುಗಿಸಲು ವಿಶೇಷ ಮತ್ತು ನಿರಂತರ ಕಾರ್ಯಾಚರಣೆ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ಆದೇಶ/ನಿರ್ದೇಶನ ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ಡಿಜಿಪಿ ರವರಿಗೆ ಪತ್ರ ಬರೆದ ನಿಮಿತ್ಯ ಪೊಲೀಸ್ ಉಪಾ ಮಹಾನಿರೀಕ್ಷಕ ಹಾಗೂ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಆಯುಕ್ತರಾದ ಕೆ. ಪರಶುರಾಮ್ ರವರು ಅಗತ್ಯ ಕ್ರಮಕ್ಕಾಗಿ ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಪತ್ರ ಹೊರಡಿಸಿದ್ದಾರೆ


