ಬಳ್ಳಾರಿ: ಹಜ್ ಯಾತ್ರಿಕರಿಗೆ ಆರೋಗ್ಯ ಜಾಗೃತಿ ಹಾಗೂ ಲಸಿಕಾ ಶಿಬಿರ

MK HasiruKranti
ಬಳ್ಳಾರಿ: ಹಜ್ ಯಾತ್ರಿಕರಿಗೆ ಆರೋಗ್ಯ ಜಾಗೃತಿ ಹಾಗೂ ಲಸಿಕಾ ಶಿಬಿರ
WhatsApp Group Join Now
Telegram Group Join Now

ಬಳ್ಳಾರಿ,ಮಾ.26
ನಗರದ ಮಹಮ್ಮದಿಯ ಕಾಲೇಜಿನಲ್ಲಿ ಹಜ್ ಯಾತ್ರೆಗೆ ತೆರಳಲಿರುವ ಮುಸ್ಲಿಂ ಸಮುದಾಯದ ಯಾತ್ರಿಕರಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ಆರೋಗ್ಯ ಜಾಗೃತಿ ಹಾಗೂ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ವಿದೇಶ ಪ್ರಯಾಣದ ಸಂದರ್ಭದಲ್ಲಿ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಹೆಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿ ಹಾಗೂ ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು. 14 ವರ್ಷದ ಹೆಣ್ಣು ಮಕ್ಕಳಿಗೆ ಈ ಲಸಿಕೆ ಹಾಕಿಸುವುದು ಅತ್ಯಂತ ಸುರಕ್ಷಿತ. ಗರ್ಭಕಂಠದ ಕ್ಯಾನ್ಸರ್ ಮುಕ್ತ ನಾಡಿಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಲಸಿಕೆ ಕೊಡಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಯಾತ್ರಿಕರಿಗೆ ಖುದ್ದಾಗಿ ಮೆನಿಂಗೊಕೊಕಲ್ ಮೆನಿಂಜೈಟಿಸ್ ಲಸಿಕೆ ಹಾಗೂ 64 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಬಿ-ಒಪಿವಿ ಮತ್ತು ಇನ್‌ಫ್ಲೂö್ಯಯೆಂಜಾ ಲಸಿಕೆ ಹಾಗೂ ಇತರೆ ಅಗತ್ಯ ಲಸಿಕೆಗಳನ್ನು ಹಾಕಿಸಿದರು.
ಬಳ್ಳಾರಿಯ ದಾರುಲ್ ಸರ್ಕಾರಿ ಖಾಜಿಗಳಾದ ಗುಲಾಮ್ ಮೊಹಮ್ಮದ್ ಸಿದ್ದಿಖಿ ಅವರು ಮಾತನಾಡಿ, ಲಸಿಕೆಯ ಬಗ್ಗೆ ಸಮುದಾಯದಲ್ಲಿ ಯಾರು ಭಯ ಪಡುವ ಅಗತ್ಯವಿಲ್ಲ. ಹೆಣ್ಣು ಮಕ್ಕಳ ಆರೋಗ್ಯ ದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು ಎಂದು ಜಾಗೃತಿ ಮೂಡಿಸಿದರು.
ಡಿ.ಡಬ್ಲ್ಯೂ.ಎ.ಸಿ ಮಾಜಿ ಅಧ್ಯಕ್ಷ ಹುಮಾಯುನ್ ಖಾನ್ ಅವರು ಮಾತನಾಡಿ, ಈ ಲಸಿಕಾ ಕಾರ್ಯಕ್ರಮವು ಒಟ್ಟು 90 ದಿನಗಳ ಕಾಲ ನಡೆಯಲಿದೆ. 14 ವರ್ಷದ ಹೆಣ್ಣು ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದು, ಇದರಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಶೇ.99 ರಷ್ಟು ತಡೆಯಬಹುದಾಗಿದೆ. ಲಸಿಕೆ ಪಡೆಯಲು ಬರುವವರು ಕಡ್ಡಾಯವಾಗಿ ಪೋಷಕರನ್ನು ಹಾಗೂ ಜನ್ಮ ದಿನಾಂಕವಿರುವ ಗುರುತಿನ ಚೀಟಿಯನ್ನು ತರಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಹನುಮಂತಪ್ಪ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಗಂಗಮ್ಮ ಹಾಗೂ ಡಿ.ಡಬ್ಲ್ಯೂ.ಎ.ಸಿ ಮಾಜಿ ಅಧ್ಯಕ್ಷರುಗಳಾದ ಹುಸೇನ್ ಪೀರ್, ಮೊಹಮ್ಮದ್ ಗೌಸ್, ಅಯಾಜ್ ಅಹಮ್ಮದ್, ಅಲ್ಲಾ ಭಕ್ಷಿ ಮತ್ತು ತೌಹಿದ್ ಸಾಬ್, ಸಾದತ್ತ್ ಸಾಬ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article