ವಿಜಯನಗರ( ಹೊಸಪೇಟೆ ):
ಕೇಂದ್ರ ಸರ್ಕಾರದ ತೈಲ ಖರೀದಿ ನೀತಿ ಹಾಗೂ ವಿದೇಶಾಂಗ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ವಿದೇಶಿ ಒತ್ತಡಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿ, ಸರ್ಕಾರವು ತನ್ನ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
ನಗರದ ವಿಜಯನಗರ ಕಾಲೇಜು ಮುಂಭಾಗದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, 100×40 ಅಳತೆಯ ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಅಮೆರಿಕಾ-ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ತೈಲ ಖರೀದಿ ವಿಚಾರದಲ್ಲಿ ಭಾರತವು ಸ್ವತಂತ್ರ ನಿರ್ಧಾರ ಕೈಗೊಳ್ಳಬೇಕಾದರೆ, ಕೇಂದ್ರ ಸರ್ಕಾರ ಅಮೆರಿಕಾದ ಸೂಚನೆಯಂತೆ ನಡೆದುಕೊಳ್ಳುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಆರೋಪಿಸಿದರು. ವಿದೇಶದಿಂದ ಖರೀದಿಸಲಾಗುತ್ತಿರುವ ತೈಲದ ವ್ಯವಹಾರದಲ್ಲಿ ಕೆಲ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು, ಭಾರತದ ಪ್ರಧಾನಿಯವರು ಬೇರೆ ದೇಶಗಳ ಒತ್ತಡಕ್ಕೆ ಮಣಿಯಬಾರದು. ರಾಷ್ಟ್ರದ ಸ್ವಾಭಿಮಾನ, ಆರ್ಥಿಕ ಸ್ವಾವಲಂಬನೆ ಮತ್ತು ವಿದೇಶಾಂಗ ಸ್ವತಂತ್ರತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ತಕ್ಷಣ ತನ್ನ ನಿಲುವು ಮರುಪರಿಶೀಲಿಸಿ, ದೇಶದ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮೆರವಣಿಗೆಯ ವೇಳೆ “ವಿದೇಶಿ ಒತ್ತಡಕ್ಕೆ ಮಣಿದ ಪ್ರಧಾನಿ ಮೋದಿಗೆ ಧಿಕ್ಕಾರ”, “ದೇಶದ ತೈಲ ನೀತಿ ದೇಶದ ಹಿತದೃಷ್ಟಿಯಿಂದ ಇರಲಿ”, “ಭಾರತದ ನಿರ್ಧಾರ ಭಾರತದ್ದಾಗಿರಲಿ” ಎಂಬ ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಸ್ಟೇಟ್ ಯೂತ್ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಸಂಯೋಜಕರಾದ ಗಣೇಶ್ ಪಾಟೀಲ್, ಭರತ್, ಸೇರಿದಂತೆ ಹಲವು ಯುವ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.


