ದೇವರ ದಾಸಿಮಯ್ಯನವರ ವಚನಗಳ ಸಾರ ಸಮಾಜಕ್ಕೆ ದಾರಿ ದೀವಿಗೆ: ಡಾ. ಔದ್ರಾಮ

MK HasiruKranti
ದೇವರ ದಾಸಿಮಯ್ಯನವರ ವಚನಗಳ ಸಾರ ಸಮಾಜಕ್ಕೆ ದಾರಿ ದೀವಿಗೆ: ಡಾ. ಔದ್ರಾಮ
WhatsApp Group Join Now
Telegram Group Join Now
ವಿಜಯಪುರ,ಮಾ.೨೩ (ಕರ್ನಾಟಕ ವಾರ್ತೆ): ಜೀವನ ಎಂಬ ರಥದಲ್ಲಿ ಭಕ್ತಿ ಎಂಬ ಕೀಲಿ ಪ್ರತಿಯೊಬ್ಬರಿಗೂ ಅತೀ ಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಇಂದಿನ ಒತ್ತಡದ ಬದುಕಿನಲ್ಲಿ ಬಹುತೇಕರು ಭಕ್ತಿಮಾರ್ಗದಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಅದೆಷ್ಟೇ ಒತ್ತಡ ಇದ್ದರೂ ಪ್ರತಿಯೊಬ್ಬರೂ ಭಕ್ತಿ ಮಾರ್ಗವನ್ನು ಮರೆಯಬಾರದು ಎಂದು ಡಾ. ಔದ್ರಾಮ ಹೇಳಿದರು.
ಎತ್ತಿನ ಬಂಡಿಗೆ ಕೀಲು ಇಲ್ಲದಿದ್ದರೆ ಅದು ಸರಾಗವಾಗಿ ಚಲಿಸುವುದಿಲ್ಲ  ಅದರಂತೆ ಪ್ರತಿಯೊಬ್ಬರಿಗೂ ಭಕ್ತಿ ಎಂಬ ಕೀಲು ಇರಬೇಕು. ಭಕ್ತಿಯನ್ನು ಅಳವಡಿಸಿಕೊಂಡರೆ ಜೀವನ ಹೂವಿನಷ್ಟೇ ಹಗುರ ಹಾಗೂ ಸುಮಧುರವಾಗುತ್ತದೆ ಎಂದು ಡಾ. ಔದ್ರಾಮ ಭಕ್ತಿಯ ಮಹತ್ವ ಉಣಬಡಿಸಿದರು.
ದೇವರ ದಾಸಿಮಯ್ಯ ಅವರ ವಚನಗಳಲ್ಲಿ ಕಾಯಕ ಮತ್ತು ಅರಿವು ಸೇರಿದಂತೆ ಜೀವನದ ಮೂಲ ತತ್ವಗಳ ಸಾರ ಅಡಗಿದೆ. ಅವರ ಪ್ರತಿಯೊಂದೂ ವಚನಗಳು ಮಾನವನ ಬದುಕಿಗೆ ದಿಕ್ಸೂಚಿಯಾಗಿವೆ. ಹಾಗಾಗಿ ಪ್ರತಿಯೊಬ್ಬರೂ ದೇವರ ದಾಸಿಮಯ್ಯನವರ ವಚನಗಳನ್ನು ಓದಿ ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಶ್ರಮವನ್ನು ಪೂಜೆಯಂತೆ ಕಂಡ ದಾಸಿಮಯ್ಯ ಅವರು, ಸಮಾನತೆ, ಸಹಕಾರ ಮತ್ತು ಸತ್ಯದ ಮಾರ್ಗವನ್ನು ಬೋಧಿಸಿದ ಮಹಾನ್ ಶರಣರು ಎಂದು ದಾಸಿಮಯ್ಯ ಅವರನ್ನು ಬಣ್ಣಿಸಿದರು.
ದಾಸಿಮಯ್ಯನವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಅವುಗಳನ್ನು ಅಳವಡಿಸಿಕೊಂಡು ಜೀವನವನ್ನು ಸಾರ್ಥಕಗೊಳಿಸಬೇಕು ಎಂದವರು ಹೇಳಿದರು.
ಬಿ.ಎಂ.ನೂಲವಿ ಮಾತನಾಡಿ. ಮುಂಬರುವ ದಿನಗಳಲ್ಲಿ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿ ಮಹನೀಯರ ವಿಚಾರಧಾರಗಳ ಕುರಿತಾಗಿ ಅರಿತುಕೊಳ್ಳಬೇಕು ಎಂದು ಹೇಳಿದರು.
ಸಂತೋಷಕುಮಾರ ಎಸ್. ಬಂಡೆ ಅವರು ದೇವರ ದಾಸಿಮಯ್ಯ ಅವರ ವಚನ ಸಾಹಿತ್ಯ ಕುರಿತು ವಿಸ್ತೃತವಾಗಿ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ರಾಹುಲ್ ಭಾವಿದೊಡ್ಡಿ,  ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣನವರ್, ಚುನಾವಣಾ ತಹಶೀಲ್ದಾರರಾದ ಪಿ. ಜಿ ಪವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸೇರಿದಂತೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article