ಬೆಳಗಾವಿ 22 ಮಾರ್ಚ್: ಜೀವನದಲ್ಲಿ ದಾಂಪತ್ಯ ಜೀವನ ಬಹುದೊಡ್ಡದು. ಧರ್ಮ ಅರ್ಥ ಕಾಮ ಮೋಕ್ಷಗಳು ಚತುರ್ವಿಧ ಪುರುಷಾರ್ಥಗಳಲ್ಲಿ ಬಹು ಮುಖ್ಯವೆನಿಸಿದೆ. ಅವುಗಳನ್ನು ಈಡೇರಿಸಿಕೊಳ್ಳುವುದು ಜೀವನದ ಕರ್ತವ್ಯವೆನಿಸಿದೆ. ಹಾಗಾಗಿ ಸೂಕ್ತ ಸಂಗಾತಿ ಆಯ್ಕೆ ಬಹು ಮುಖ್ಯವಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಕೆಎಲ್ಇ ಸಂಸ್ಥೆ ಪ್ರತಿ ವರ್ಷ ಬೃಹತ್ ಸಮ್ಮೇಳನಗಳನ್ನ ಆಯೋಜಿಸುವ ಮೂಲಕ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ ಇದರ ಲಾಭವನ್ನು ಸಮಾಜದ ಒಳಪಂಗಡಗಳನ್ನು ಮರೆತು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಧು-ವರ ಅನ್ವೇಷಣ ಕೇಂದ್ರದ ಅಧ್ಯಕ್ಷ ಡಾ. ಎಫ್. ವಿ .ಮಾನ್ವಿ ಹೇಳಿದರು.
ಅವರು ಬೆಳಗಾವಿಯ ಜೆ ಎನ್ ಎಂ ಸಿ ಜೀರಿಗೆ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವಧು-ವರ ಅನ್ವೇಷಣಾ ಕೇಂದ್ರ ಹಾಗೂ ಕೆ ಎಲ್ ಇ ಸಂಸ್ಥೆ ಸಹಯೋಗದಲ್ಲಿ ವಧು-ವರ ಪಾಲಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಬಹಳ ಸಂಗಾತಿ ಸೂಕ್ತ ಆಯ್ಕೆ ಬಹು ಮುಖ್ಯವಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಕೆಎಲ್ಇ ಸಂಸ್ಥೆ ಪ್ರತಿ ವರ್ಷ ಬೃಹತ್ ಸಮ್ಮೇಳನಗಳನ್ನ ಆಯೋಜಿಸುವ ಮೂಲಕ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ ಇದರ ಲಾಭವನ್ನು ಸಮಾಜದ ಒಳಪಂಗಡಗಳನ್ನು ಮರೆತು ಸದ್ಬಳಕೆ ಮಾಡಿಕೊಳ್ಳಬೇಕು.
ಇಂದು ಉದ್ಯೋಗಕ್ಕಾಗಿ ಬೇರೆಬೇರೆ ದೂರದ ಊರುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಮಕ್ಕಳಿಗೆ ಕಂಕಣ ಭಾಗ್ಯ ದೊರೆಯುವುದು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಘಟಕ ಮಹಾಸಭೆಯು ಒಂದೇ ಸೂರಿ ನಡಿ ವಧು ವರ ಪಾಲಕರ ಸಮಾವೇಶಗಳನ್ನು ಆಯೋಜಿಸಿ ಅನುಕೂಲ ಕಲ್ಪಿಸಿದೆ. ಇದರಿಂದ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತಷ್ಟು ಸುಲಭವಾಗಿದೆ. ಈ ನಿಟ್ಟಿನಲ್ಲಿ ಡಾ. ಪ್ರಭಾಕರ ಕೋರೆ ಅವರ ಕೊಡುಗೆ ಬಹುದೊಡ್ಡದು ಎಂದು ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಎಂ.ಬಿ. ಜಿರಲಿ ಅವರು ಮಾತನಾಡಿ, ಕುಟುಂಬ ವ್ಯವಸ್ಥೆ ಅತಂತ್ರವಾಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ಗಟ್ಟಿಗೊಳಿಸುವ ಕೆಲಸವನ್ನು ಮಹಾಸಭೆ ಹಾಗೂ ಕೆ ಎಲ್ ಎ ನಿರಂತರವಾಗಿ ಮಾಡುತ್ತಾ ಬಂದಿದೆ. ಡಾ. ಪ್ರಭಾಕರ ಕೋರೆ ಅವರು ಕಾರ್ಯಾಧ್ಯಕ್ಷರಾದಾಗಿನಿಂದಲೂ ವಧುವರ ಸಮ್ಮೇಳನಗಳನ್ನು ಪ್ರತಿ ವರ್ಷ ಹಮ್ಮಿಕೊಂಡು ಸಮಾಜಕ್ಕೆ ಮಹದೂಪಕಾರ ಮಾಡಿದ್ದಾರೆ. ವಧು ವರರನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಲು ಇದೊಂದು ಪ್ರಶಸ್ತವಾದ ವೇದಿಕೆ, ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಪ್ರಸ್ತಾವಿಕ ನುಡಿಗಳ ನಾಡಿದ ಡಾ. ಗುರುದೇವಿ ಹುಲೇಪ್ಪನವರಮಠ , ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ವಧು-ವರರ ಒಂದು ಭವ್ಯವೇದಿಕೆಯನ್ನು ಮಹಾಸಭೆ ಕಲ್ಪಿಸಿ ಕೊಡುವುದರ ಮೂಲಕ ಸಂಖ್ಯ ಕುಟುಂಬಗಳ ಬದುಕಿಗೆ ಆಶ್ರಯವಾಗಿದೆ. ಇದಕ್ಕೆ ಸಹಾಯ ಸಹಕಾರ ನೀಡಿದ ಕೆ ಎಲ್ ಈ ಕೊಡುಗೆ ಅನನ್ಯ ಎಂದು ಹೇಳಿದರು.
ಅಧ್ಯಕ್ಷೀಯ ನುಡಿಗಳನಾಡಿದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ರತ್ನಪ್ರಭಾ ಬೆಲ್ಲದ ಅವರು ವಧು ವರ ಅನ್ವೇಷಣ ಕೇಂದ್ರವು ಯಾವುದೇ ವಾಣಿಜ್ಯಕರವಾದ ಲಾಭವನ್ನು ಪಡೆದುಕೊಳ್ಳದೆ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದೆ. ಮನಸ್ಸಿನಲ್ಲಿ ಯಾವ ಗೊಂದಲಗಳನ್ನು ಇಟ್ಟುಕೊಳ್ಳದೆ ವಧು-ವರ ಪಾಲಕರು ಪರಿಹಾರವನ್ನು ಇಲ್ಲಿ ಕಂಡುಕೊಳ್ಳಬಹುದು. ಮಹಾಸಭೆ ಸದಾ ನಿಮ್ಮ ಜೊತೆಗೆ ಬೆಂಬಲವಾಗಿ ನಿಲ್ಲುತ್ತದೆ. ಸುಖಿ ಕುಟುಂಬಕ್ಕೆ ವೇದಿಕೆ ಕಲ್ಪಿಸುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ ಅನ್ವೇಷಣಾ ಕೇಂದ್ರದ ಸದಸ್ಯರಾದ ಪ್ರಕಾಶ್ ಬಾಳೆಕುಂದ್ರಿ, ಬಾಲಚಂದ್ರ ಭಾಗಿ, ಸೋಮಶೇಖರ್ ಚೊನ್ನದ ಉಪಸ್ಥಿತರಿದ್ದರು.
ಆಶಾ ಯಮಕನಮರಡಿ ಪ್ರಾರ್ಥನೆ ಸಲ್ಲಿಸಿದರು. ಮಹೇಶ್ ಗುರುನಗೌಡರ ವಂದಿಸಿದರು. ಆರ್. ಕೆ.ನಿರ್ಲಿ ನಿರೂಪಿಸಿದರು. ಸರೋಜಿನಿ ನಿಶಾನ್ದಾರ, ಜ್ಯೋತಿ ಬಾದಾಮಿ, ಆರ್ ಪಿ ಪಾಟೀಲ, ಎಂ ವೈ ಮೆಣಸಿನಕಾಯಿ ಹಾಗೂ ಎರಡರಕ್ಕೂ ಹೆಚ್ಚು ವಧು ವರರು ಪಾಲ್ಗೊಂಡಿದ್ದರು.


