ಬಳ್ಳಾರಿ ಮಾ.23: ಸ್ವದೇಶಿ ಭಾವನೆ ಜೀವನದ ಎಲ್ಲಾ ರಂಗಗಳಲ್ಲಿ ಪ್ರಕಟವಾಗಬೇಕು, ಸ್ವ ಭಾಷಾ ಪ್ರೇಮ, ಸ್ವದೇಶಿ ಪ್ರೇಮ ಹಾಗೂ ಸ್ವದೇಶ ಪ್ರೇಮ ಎಲ್ಲರಲ್ಲೂ ಇರಬೇಕು. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸಗಳ ಬಗ್ಗೆ ಹೆಮ್ಮೆ ಇರಬೇಕು. ‘ಎಲ್ಲಾ ದಿಕ್ಕುಗಳಿಂದಲೂ ಸದ್ವಿಚಾರಗಳು ಬರಲಿ’ ಎಂದು ನಮ್ಮ ವೇದಗಳೇ ಹೇಳಿವೆ. ಆದರೆ 21ನೇ ಶತಮಾನದಲ್ಲಿ ನಾವಿಂದು ಆಧುನಿಕರು, ಪ್ರಗತಿಪರರು ಎಂದು ಹೇಳಿಕೊಳ್ಳುತ್ತಾ ನಮ್ಮ ಮಾತೃಭಾಷೆಯನ್ನು ಬಳಸಲು, ಇಂದಿನ ಅವಶ್ಯಕತೆಗನುಗುಣವಾಗಿ ಅದನ್ನು ವಿಕಾಸಗೊಳಿಸುವುದನ್ನು ಬಿಟ್ಟು, ಪರಭಾಷೆಯ ಹಿಂದೆ ಬಿದ್ದಿರುವ ನಮ್ಮ ಸುಶಿಕ್ಷಿತ ವರ್ಗದ ಮನೋದ್ಯಾಸದ ಕುರಿತಂತೆ ತೀವ್ರ ಆಕ್ರೋಶವಿದ್ದ ಪಂ.ದೀನದಯಾಳ ಉಪಾಧ್ಯಾಯರ ಖಚಿತ ಅಭಿಪ್ರಾಯವೆಂದರೆ, ಮಾತೃಭಾಷೆಯ ಅಭ್ಯುದಯವಾಗದೇ ಭಾರತದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಅಪೂರ್ಣವಾಗಿ ಉಳಿದು ಬಿಡುತ್ತವೆ. ಮಾತೃಭಾಷೆಯ ಶಿಕ್ಷಣ ಮಾಧ್ಯಮವೇ ಇದಕ್ಕೆಲ್ಲಾ ಪರಿಹಾರ ಎಂಬ ಪಂ.ದೀನದಯಾಳರ ಇಂತಹ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಆರ್.ಎಸ್.ಎಸ್.ನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಗೋಪಿಯವರು ತಿಳಿಸಿದರು, ಅವರು ನಿನ್ನೆ ನಗರದ ಡಾ.ರಾಜಕುಮಾರ ರಸ್ತೆಯಲ್ಲಿರುವ ಪಾಂಚಜನ್ಯ ಸಭಾಂಗಣದಲ್ಲಿ, ವಿದ್ಯಾರ್ಥಿ ಶಿಕ್ಷಣ ಸಂಸ್ಕೃತಿ ಸೇವಾ ಸಮಿತಿ ಹಾಗೂ ಎಬಿವಿಪಿ ನಗರ ಘಟಕಗಳು ಸಂಯುಕ್ತವಾಗಿ ಆಯೋಜಿಸಿದ್ದ ಪಂ.ದೀನ ದಯಾಳ ಉಪಾಧ್ಯಾಯರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಬಿ.ಎಲ್.ವೆಂಕಟೇಶ ಅವರು ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲಕು ಹಾಕುತ್ತಾ ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಾಜಮುಖಿ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಆರಂಭದಲ್ಲಿ ಎನ್.ಬಸವರಾಜ ಪ್ರಾರ್ಥಿಸಿದರು, ಎಬಿವಿಪಿ ಜಿಲ್ಲಾ ಸಂಚಾಲಕ ಕೆ.ದಿಲೀಪಕುಮಾರ ಸ್ವಾಗತಿಸಿದರು, ಭರತ ತಳವಾರ ವಂದಿಸಿದರು, ಕುಮಾರಿ ಇಂದಿರಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಮಿತಿಯ ಕಾರ್ಯದರ್ಶಿ ಮರ್ಚೇಡ್ ಮಲ್ಲಿಕಾರ್ಜುನಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಜಡೇಶ ಎಮ್ಮಿಗನೂರು ಅವರು ಮಧುರ ಗಾಯನದಿಂದ ‘ಗಾನದುಂದುಬಿ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹಾರ್ಮೋನಿಯಂನಲ್ಲಿ ಶಿವಕುಮಾರ, ತಬಲಾದಲ್ಲಿ ಹರ್ಷ ಆಚಾರ್ ಸಾತ್ ನೀಡಿದರು. ಎಂದು ವಿದ್ಯಾರ್ಥಿ ಶಿಕ್ಷಣ, ಸಂಸ್ಕೃತಿ ಸೇವಾ ಸಮಿತಿಯ ಅಧ್ಯಕ್ಷ ಕೆ.ಹೆಚ್.ಹರಿಕುಮಾರ್ ತಿಳಿಸಿದ್ದಾರೆ.


