ತೆಕ್ಕಲಕೋಟೆ23..: ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ತೆಕ್ಕಲಕೋಟೆ ಪಟ್ಟಣದಲ್ಲಿ ನಡೆದ ಜಾತ್ರೆ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಬಯಲಾಟ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಬಿಜೆಪಿ ಯುವ ಮೋರ್ಚಾ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ಅವರು ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಮೊದಲು ಅವರು ಶ್ರೀ ಗುರು ಕಾಡ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ಬಳಿಕ ರಾತ್ರಿ ನಡೆದ “ರತಿ ಕಲ್ಯಾಣ ಅರ್ಥಾರ್ಥ ಕಂಸನ ವಧೆ” ಬಯಲು ನಾಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿ. ಶ್ರೀರಾಮುಲು, ನಮ್ಮ ನಾಡಿನ ಪಾರಂಪರಿಕ ಕಲೆಗಳಾದ ಬಯಲಾಟಗಳು ಗ್ರಾಮೀಣ ಸಂಸ್ಕೃತಿಯ ಜೀವಾಳವಾಗಿದ್ದು, ಇಂತಹ ಕಾರ್ಯಕ್ರಮಗಳು ಯುವಪೀಳಿಗೆಗೆ ಸಂಸ್ಕೃತಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ಅವರು ಮಾತನಾಡಿ, ಬಯಲಾಟ, ಸಂಗೀತ ಮತ್ತು ನಾಟಕಗಳು ನಮ್ಮ ಸಂಸ್ಕೃತಿಯ ಅಡಿಪಾಯವಾಗಿದ್ದು, ಕಲಾವಿದರ ಪರಿಶ್ರಮದಿಂದಲೇ ಇಂತಹ ಪರಂಪರೆಗಳು ಜೀವಂತವಾಗಿವೆ. ಇವುಗಳನ್ನು ಉಳಿಸಿ ಬೆಳೆಸಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು. ಜೊತೆಗೆ, ಯುವಕರಲ್ಲಿ ಕಲೆಯ ಮೇಲಿನ ಆಸಕ್ತಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕವೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಕೆ. ಮಾರುತಿ, ಸದಸ್ಯರಾದ ಮಂಜುನಾಥ ಹಾಗೂ ಕೃಷ್ಣ, ಮುಖಂಡರಾದ ಉಮೇಶ, ಅನಿಲ್, ದೇವೇಂದ್ರ, ನರಸಪ್ಪ, ರಂಜಿತ್, ಗಾದಿಲಿಂಗ, ಮಲ್ಲಪ್ಪ ಸೇರಿದಂತೆ ಅನೇಕ ಕಲಾಭಿಮಾನಿಗಳು, ಯುವಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


